DAKSHINA KANNADA
ಡಿ ಗ್ಯಾಂಗ್ ನ ಗ್ಯಾಂಗ್ ಲೀಡರ್ ಅಂದರ್….!!

ಪುತ್ತೂರು ಎಪ್ರಿಲ್ 6: ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದ ಡಿ ಗ್ಯಾಂಗ್ ನ ಲೀಡರ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಡಿ ಗ್ಯಾಂಗ್ ಮುಖ್ಯಸ್ಥ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ ಹಾಗೂ ಗ್ಯಾಂಗ್ ನ ಸದಸ್ಯರುಗಳಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಜ್ ಯಾನೆ ಕುವ ಫಯಾಜ್ , ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ , ಮಹಾರಾಷ್ಟ್ರ ಜಲಗಾವ್ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಯಾನೆ ರಾಕಿ ಬಾಯ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಕರ್ನಾಟಕ ಕೇರಳ ಗಡಿ ಭಾಗದ ಸಾಲೆತ್ತೂರು ಕೊಡಂಗೆಯ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ವೇಳೆ ವಿಟ್ಲ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದರು. ಇವರ ಬಂಧನಕ್ಕೆ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು.
ಈ ನಡುವೆ ಆರೋಪಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ವೇಳೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರಾಜೆ ಬುಡೋಳಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ವಿಚಾರಣೆ ವೇಳೆ ಒಂದು 7.65 ಎಂಎಂ ಪಿಸ್ತೂಲ್, 1 ನಾಡ ಕೊವಿ, 13 ಸಜೀವ ಮದ್ದುಗುಂಡು, ಒಂದು ಕಾರನ್ನು ವಶ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.