UDUPI
ವಿದ್ಯುತ್ ಅವಘಡಕ್ಕೆ ಬಲಿಯಾದ ಕಂಬಳ ಸಾಧಕ
ಉಡುಪಿ ಜೂನ್ 22 : ಕಾರ್ಕಳದ ಮುಂಡ್ಳಿಯಲ್ಲಿನ ತಂಪು ಪಾನೀಯ ಫ್ಯಾಕ್ಟರಿಯಲ್ಲಿ ನಡೆದ ವಿದ್ಯುತ್ ಅಪಘಡದಲ್ಲಿ ಫ್ಯಾಕ್ಟರಿ ಮಾಲೀಕ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಕಾರ್ಕಳ ತೆಳ್ಳಾರು ರಸ್ತೆಯ ಸಾಂತ್ರಬೆಟ್ಟು ನಿವಾಸಿ ರತ್ನವರ್ಮ ಜೈನ್ ಎಂದು ಗುರುತಿಸಲಾಗಿದೆ. ಕಂಬಳ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಬಹಳಷ್ಟು ಸಾಧನೆ ಮಾಡಿದ್ದರು.
ತಂಪು ಪಾನೀಯ ಫ್ಯಾಕ್ಟರಿಯಲ್ಲಿ ವಿದ್ಯುತ್ ಸಮಸ್ಯೆಯಿದ್ದ ಕಾರಣ ಜನರೇಟರ್ ಬಳಸಲಾಗುತ್ತಿತ್ತು. ರವಿವಾರದಂದು ಇಲೆಕ್ಟ್ರೀಶಿಯನ್ ಆಗಮಿಸಿ ವಿದ್ಯುತ್ ಸಮಸ್ಯೆ ಸರಿಪಡಿಸಿ ಹೋಗಿದ್ದರು. ಸೋಮವಾರ ಮುಂಜಾನೆ ಆಗಮಿಸಿದ ರತ್ನವರ್ಮ ಜೈನ್ ಅವರು ಜನರೇಟರ್ ಆಫ್ ಮಾಡಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಕಂಬಳ ಕೋಣಗಳ ಯಜಮಾನರಾಗಿದ್ದ ಮುಡಾರು ಸಾಂತಾಜೆ ರತ್ನವರ್ಮ ಜೈನ್ ಅವರು ನೇಗಿಲು ಹಿರಿಯ ವಿಭಾಗದಲ್ಲಿ ದೊಡ್ಡ ಸಾಧನೆ ಮಾಡಿದ್ದರು. 1985ರಲ್ಲಿ ಕಂಬಳ ಕ್ಷೇತ್ರಕ್ಕೆ ಕಾಲಿರಿಸಿದ್ದ ರತ್ನವರ್ಮ ಜೈನ್ ನೇಗಿಲು ಹಿರಿಯ ವಿಭಾಗದಲ್ಲಿ ಎರಡು ಜೊತೆ ಕೋಣಗಳನ್ನು ಕಟ್ಟಿ 1994-95ರವರೆಗೆ ಬಹಳಷ್ಟು ಪದಕ ಜಯಿಸಿದ್ದರು. ನಂತರದ ದಿನಗಳಲ್ಲಿ ಎರಡು ವರ್ಷಗಳ ಕಾಲ ಅಡ್ಡಹಲಗೆ ವಿಭಾಗದಲ್ಲೂ ಸ್ಪರ್ಧಿಸಿ ಮಿಂಚಿದ್ದರು.