LATEST NEWS
ನವಮಂಗಳೂರು ಬಂದರಿಗೆ ಬಂದ ಐಷರಾಮಿ ಪ್ರವಾಸಿ ನೌಕೆ ಎಂಎಸ್ ನೌಟಿಕಾ
ಮಂಗಳೂರು ಡಿಸೆಂಬರ್ 16: ನವಮಂಗಳೂರು ಬಂದರಿಗೆ ಪ್ರಸಕ್ತ ಸಾಲಿನ ಮೂರನೇ ಪ್ರಯಾಣಿಕರ ಹಡಗು ಆಗಮಿಸಿದೆ. ಒಟ್ಟು 548 ಪ್ರವಾಸಿಗರನ್ನು ಈ ಹಡಗು ಕರೆತಂದಿದೆ. ಎಂಎಸ್ ನೌಟಿಕಾ ಎಂಬ ಹೆಸರಿನ ಹಡಗು ಇದಾಗಿದ್ದು, ಸುಮಾರು 548 ಪ್ರಯಾಣಿಕರು ಹಾಗೂ 397 ಸಿಬ್ಬಂದಿಯನ್ನು ಹೊಂದಿದ್ದು, ಒಟ್ಟು 30,277 ಟನ್‌ಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ.
ಮಾಲ್ಡೀವ್‌ಗೆ ಪ್ರಯಾಣ ಬೆಳೆಸಿರುವ ಈ ಹಡಗು ಮಸ್ಕತ್‌ನಿಂದ ಭಾರತಕ್ಕೆ ಬಂದಿದ್ದು, ಮುಂಬೈ, ಮೊರ್ಮಗಾಂವನಿಂದ ಮಂಗಳೂರು ಪ್ರವೇಶಿಸಿದೆ. ಗುರುವಾರ ಬೆಳಿಗ್ಗೆ 6 ಗಂಟೆಗೆ ನವ ಮಂಗಳೂರು ಬಂದರು ತೀರಕ್ಕೆ ಹಡಗು ಬಂದಿದ್ದು, ಅದರಲ್ಲಿದ್ದ ಪ್ರಯಾಣಿಕರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಕಾರ್ಕಳದ ಗೊಮ್ಮಟೇಶ್ವರ, ಅಲೋಶಿಯಸ್ ಚಾಪೆಲ್ ಮತ್ತು ಅಚಲ್ ಗೇರುಬೀಜ ಕಾರ್ಖಾನೆ ಸೇರಿದಂತೆ ಮಂಗಳೂರು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು, ಮಾರುಕಟ್ಟೆಗೆ ಭೇಟಿ ನೀಡಿದರು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಕ್ಷಿಪ್ರ ಸಂಚಾರಕ್ಕಾಗಿ ವಲಸೆ ಮತ್ತು ಕಸ್ಟಮ್ಸ್ ಕೌಂಟರ್‌ಗಳು, ಸ್ಥಳೀಯ ಮಾರುಕಟ್ಟೆಗೆ ಭೇಟಿ ನೀಡುವ ಪ್ರಯಾಣಿಕರಿಗೆ ಎರಡು ಶಟಲ್ ಬಸ್‌ಗಳು ಸೇರಿದಂತೆ 18 ಕೋಚ್‌ಗಳನ್ನು ಒದಗಿಸಲಾಗಿತ್ತು. ಕ್ರೂಸ್ ಪ್ರಯಾಣಿಕರು ಕ್ರೂಸ್ ಲಾಂಜ್‌ನ ಒಳಗೆ ಆಯುಷ್ ಇಲಾಖೆಯ ಧ್ಯಾನ ಕೇಂದ್ರದ ಪ್ರಯೋಜನ ಪಡೆದರು. ಸಂಜೆ 5 ಗಂಟೆಯ ಸುಮಾರಿಗೆ ಹಡಗು ಕೊಚ್ಚಿಗೆ ಪ್ರಯಾಣ ಬೆಳೆಸಿತು.