LATEST NEWS
ಲಾಕ್ ಡೌನ್ ಕಾಲದಲ್ಲೂ ಕೊಹ್ಲಿ ಭರ್ಜರಿ ಬ್ಯಾಟಿಂಗ್ ; ಮನೆಯಲ್ಲಿ ಕುಳಿತೇ ಕೋಟಿ ಬಾಚಿದ ಸ್ಟಾರ್ !

3.6 ಕೋಟಿ ರೂಪಾಯಿ ಹಣ ಗಳಿಸಿದ ವಿರಾಟ್ ಕೊಹ್ಲಿ
ನವದೆಹಲಿ, ಜೂನ್ 6: ಲಾಕ್ ಡೌನ್ ಕಾಲದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಂದ ಹಿಡಿದು ಜಗತ್ತಿನ ಎಲ್ಲ ವರ್ಗದ ಜನರೂ ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಆದರೆ, ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮಾತ್ರ ಭರ್ಜರಿ ಲಾಭ ಮಾಡಿಕೊಂಡಿದ್ದಾರೆ.
ಹೌದು.. ಲಾಕ್ ಡೌನ್ ವೇಳೆಯ ಮಾರ್ಚ್ 12ರಿಂದ ಮೇ 14ರ ನಡುವಿನ ಎರಡು ತಿಂಗಳಲ್ಲಿ ಕೊಹ್ಲಿ ಯಾರೂ ಊಹಿಸದ ರೀತಿ ಮನೆಯಲ್ಲಿ ಕುಳಿತೇ ಹಣ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಅವರ ನೆರವಿಗೆ ಬಂದಿದ್ದು ಸಾಮಾಜಿಕ ಜಾಲತಾಣ ಅಂದರೆ ನೀವು ನಂಬಲೇಬೇಕು. ಲಾಕ್ ಡೌನ್ ಸಮಯದಲ್ಲಿ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ವಿರಾಟ್ ಕೊಹ್ಲಿಯ ಪೇಮೆಂಟ್ ಲಿಸ್ಟ್ ಈಗ ಹೊರಬಿದ್ದಿದೆ.

ಇನ್ ಸ್ಟಾಗ್ರಾಂ ಒಂದರಲ್ಲೇ ವಿವಿಧ ಪ್ರಾಯೋಜಿತ ಪೋಸ್ಟ್ ಗಳಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಕೊಹ್ಲಿ 3.6 ಕೋಟಿ ರೂಪಾಯಿ ಗಳಿಸಿದ್ದಾರೆ. ಅಷ್ಟೇ ಅಲ್ಲ, ಹೀಗೆ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಕ್ರೀಡಾಳುಗಳ ಪೈಕಿ ಜಗತ್ತಿನ ಆರನೇ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪೋರ್ಚುಗಲ್ ದೇಶದ ಫುಟ್ಬಾಲ್ ತಾರೆ ರೊನಾಲ್ಡೊ ಕ್ರಿಸ್ಟಿಯಾನೋ 17.28 ಕೋಟಿ ರೂಪಾಯಿ ಗಳಿಸಿ ಮೊದಲ ಸ್ಥಾನ ಪಡೆದಿದ್ದಾರೆ. ಆರ್ಜೆಂಟೀನಾದ ಫುಟ್ಬಾಲ್ ಆಟಗಾರ ಲಯೋನೆಲ್ ಲಸ್ಸಿ 11.52 ಕೋಟಿ ಗಳಿಸಿದ್ದರೆ, ಅದೇ ದೇಶದ ನೆಮಾರ್ 10.56 ಕೋಟಿ ರೂ. ಗಳಿಕೆ ಮಾಡಿಕೊಂಡಿದ್ದಾರೆ.
ಹಾಗೆಯೇ ಬಾಸ್ಕೆಟ್‌ಬಾಲ್ ಆಟಗಾರ ಶಕೀಲ್ ಓ ನೀಲ್ 5.6 ಕೋಟಿ ಪಡೆದಿದ್ದರೆ, ಇಂಗ್ಲೆಂಡ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕಂ ವಿವಿಧ ಜಾಹೀರಾತುಗಳಿಂದ 3.88 ಕೋಟಿ ಗಳಿಸಿದ್ದಾರೆ. ಜಾಹೀರಾತುಗಳಿಂದ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಹತ್ತು ಕ್ರೀಡಾ ತಾರೆಯರಲ್ಲಿ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದು ಭಾರತದ ವಿರಾಟ್ ಕೊಹ್ಲಿ ಮಾತ್ರ. ಇತ್ತೀಚೆಗೆ ಫೋರ್ಬ್ಸ್ ಲಿಸ್ಟ್ ಮಾಡಿದ್ದ ವಿಶ್ವದ 100 ಶ್ರೀಮಂತ ಕ್ರೀಡಾ ತಾರೆಗಳಲ್ಲಿ ಕೊಹ್ಲಿ ಕೂಡ ಒಬ್ಬರಾಗಿದ್ದರು.
ಲಾಕ್ ಡೌನ್ ಕಾಲದಲ್ಲಿ ಜಗತ್ತಿನ ಯಾವುದೇ ದೇಶದಲ್ಲಿಯೂ ಕ್ರೀಡಾ ಚಟುವಟಿಕೆಗಳು ನಡೆದಿಲ್ಲ. ಹೀಗಾಗಿ ಬಹುತೇಕ ಕ್ರೀಡಾ ತಾರೆಯರು ಜಾಹೀರಾತು ಗಳಲ್ಲಿ ಕಾಣಿಸಿಕೊಂಡು ಮನೆಯಲ್ಲಿ ಕುಳಿತೇ ಭರ್ಜರಿ ಹಣ ಮಾಡಿಕೊಂಡಿದ್ದಾರೆ.