LATEST NEWS
ಕ್ರಿಕೆಟಿಗ ಕೆ.ಎಲ್ ರಾಹುಲ್ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ

ಕ್ರಿಕೆಟಿಗ ಕೆ.ಎಲ್ ರಾಹುಲ್ ಸುಬ್ರಹ್ಮಣ್ಯ ದೇವಸ್ಥಾನ ಭೇಟಿ
ಮಂಗಳೂರು ಅಕ್ಟೋಬರ್ 3: ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ ಕೆ.ಎಲ್ ರಾಹುಲ್ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ಸುಮಾರು 9 ಗಂಟೆ ಸುಮಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಕುಕ್ಕೆ ಸುಬ್ರಮಣ್ಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಪ್ರತಿವರ್ಷವೂ ಕೆ.ಎಲ್.ರಾಹುಲ್ ಕುಕ್ಕೆ ಸುಬ್ರಮಣ್ಯ ಆಗಮಿಸುವುದು ಸಾಮಾನ್ಯವಾಗಿದ್ದು, ಈ ಬಾರಿಯೂ ದೇವರಿಗೆ ಮಹಾಪೂಜೆ ನೆರವೇರಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಕಳೆದ ಕೆಲವು ವರ್ಷಗಳಿಂದ ಕೆ.ಎಲ್.ರಾಹುಲ್ ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್ ನಲ್ಲಿ ಮಿಂಚುತ್ತಿರುವುದಕ್ಕೂ ಸುಬ್ರಮಣ್ಯ ದೇವರ ಸೇವೆಯೇ ಕಾರಣ ಎನ್ನುವುದು ಅವರ ಸ್ನೇಹಿತ ವರ್ಗದ ಅಭಿಪ್ರಾಯವೂ ಆಗಿದೆ. ಕ್ಷೇತ್ರದಲ್ಲಿ ಪೂಜೆ ನೆರವೇರಿಸಿ , ಅನ್ನದಾನ ಪೂರೈಸಿದ ರಾಹುಲ್, ಕ್ಷೇತ್ರದ ಆನೆ ಯಶಸ್ವಿನಿಯ ಆಶೀರ್ವಾದವನ್ನೂ ಪಡೆದರು.

ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮುಂದಿನ ಶನಿವಾರದಿಂದ ಮೂರು ಪಂದ್ಯಗಳ ಟಿ 20 ಸರಣಿ ಆರಂಭಗೊಳ್ಳಲಿದೆ. ಈ ಟಿ 20 ತಂಡದಲ್ಲಿ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ . ಈಗಾಗಲೇ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ತೋರಿರುವ ಕೆ.ಎಲ್ ರಾಹುಲ್ ಮುಂಬರುವ ಟಿ 20 ಸರಣಿಯಲ್ಲಿಯೂ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ.
ದೇವಾಲಯಕ್ಕೆ ಸಾಮಾನ್ಯರಂತೆ ಭೇಟಿ ನೀಡಿದ ಕೆ.ಎಲ್ ರಾಹುಲ್ ಜನರ ನಡುವೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಬಂದಿದ್ದ ಭಕ್ತರು ಕೆಎಲ್ ರಾಹುಲ್ ಅವರಿಗೆ ಮುಂದಿನ ಟಿ 20 ಪಂದ್ಯಗಳಿಗಾಗಿ ಶುಭ ಹಾರೈಸಿದರು.
VIDEO