LATEST NEWS
ಮಂಗಳೂರು – ಬಿಜೆಪಿ ಕಾಂಗ್ರೇಸ್ ಕ್ರೆಡಿಟ್ ಪಾಲಿಟಿಕ್ಸ್ ಗೆ ಎರಡೆರಡು ಬಾರಿ ಉದ್ಘಾಟನೆಯಾದ ಪ್ರಾಥಮಿಕ ಆರೋಗ್ಯ ಕೇಂದ್ರ

ಮಂಗಳೂರು ಫೆಬ್ರವರಿ 15: ಮಂಗಳೂರಿನಲ್ಲಿ ಬಿಜೆಪಿ ಹಾಗೂ ಕಾಂಗ್ರೇಸ್ ನಡುವಿನ ಕ್ರೆಡಿಟ್ ಪಾಲಿಟಿಕ್ಸ್ ಜೋರಾಗಿದೆ. ಇದಕ್ಕೆ ಉದಾಹರಣೆಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಎರಡೆರಡು ಬಾರಿ ಉದ್ಘಾಟನೆ ಭಾಗ್ಯ ಕಂಡಿದೆ. ಜಪ್ಪಿನಮೊಗರಿನ ಹೊಸ ಆರೋಗ್ಯ ಕೇಂದ್ರವನ್ನು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತೆ ಉದ್ಘಾಟನೆ ಮಾಡಿದ್ದಾರೆ.
ಮಂಗಳಾದೇವಿ ವಾರ್ಡ್ ಜೆಪ್ಪು ಮುಖ್ಯರಸ್ತೆಯಲ್ಲಿ ನವೀಕರಿಸಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಕೀರ್ಣಕ್ಕೆ ಒಂದು ವಾರದ ಒಳಗೆ ಎರಡನೇ ಬಾರಿ ಚಾಲನೆ ಸಿಕ್ಕಿದೆ. ಆರೋಗ್ಯ ಕೇಂದ್ರ ಇದ್ದ ಜಾಗದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ₹ 7.85 ಕೋಟಿ ವೆಚ್ಚದಲ್ಲಿ ಆರೋಗ್ಯ ಕೇಂದ್ರ, ಪಶು ಆಸ್ಪತ್ರೆ, ಪಾಲಿಕೆ ಸಿಬ್ಬಂದಿಯ ವಸತಿಗೃಹ, ಬಸ್ ಬೇ ಮತ್ತು ವಾಕಿಂಗ್ ಪಾಥ್ ನಿರ್ಮಿಸಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಶಿಷ್ಟಾಚಾರ ಪಾಲನೆ ಆಗಲಿಲ್ಲ ಎಂದು ಆರೋಪಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಕಾರ್ಯದರ್ಶಿಗೆ ಗುರುವಾರ ಸೂಚಿಸಿದ್ದರು. ಫೆಬ್ರವರಿ 9ರ ಭಾನುವಾರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೇಯರ್ ಮನೋಜ್ ಹಾಗೂ ಸಂಸದ ಬ್ರಿಜೇಶ್ ಚೌಟರಿಂದ ಉದ್ಘಾಟನೆ ಆಗಿತ್ತು, ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಗೂ ಮಾಹಿತಿ ನೀಡದೇ ಬಿಜೆಪಿಗರಿಂದ ಉದ್ಘಾಟನೆ ಆರೋಪ ಕೇಳಿ ಬಂದಿತ್ತು, ಆದರೆ ಶಿಷ್ಟಾಚಾರದ ನೆಪವೊಡ್ಡಿ ನಾಲ್ಕೇ ದಿನಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ವೈದ್ಯಕೀಯ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು.
ಇದೀಗ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಕೇಂದ್ರ ಉದ್ಘಾಟಿಸಿದ್ದಾರೆ. ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಚಿವ ಗುಂಡೂರಾವ್, ನೇರವಾಗಿ ಶಾಸಕ ವೇದವ್ಯಾಸ ಕಾಮತ್ ವಿರುದ್ಧ ಕಿಡಿಕಾರಿದರು. ಇವರು ಚೀಪ್ ರಾಜಕೀಯ ಮಾಡುತ್ತಿದ್ದಾರೆ. ನಾವು ಎಲ್ಲರನ್ನು ಕರೆದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿಲ್ವಾ.. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಡರ್ಟಿ ರಾಜಕೀಯ ಮಾಡೋದಾ.. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿದ್ದಲ್ಲ, ಇವರದೇ ಹಣ, ಭೂಮಿ ಆಗಿರುತ್ತಿದ್ದರೆ ಕೇಳುತ್ತಿರಲಿಲ್ಲ. ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ, ತಿಂಗಳಲ್ಲಿ 2-3 ಬಾರಿ ಮಂಗಳೂರಿಗೆ ಬರುತ್ತೇನೆ. ಒಂದು ಫೋನ್ ಮಾಡಬಹುದಿತ್ತಲ್ವಾ.. ಶಾಸಕನ ನಡೆಯಿಂದ ಮುಜುಗರ ಸೃಷ್ಟಿ ಆಗಿದೆ ಎಂದು ಹೇಳಿದರು.
1 Comment