DAKSHINA KANNADA
ಅಗತ್ಯ ವಸ್ತುಗಳ ಬೆಲೆ ಏರಿಕೆ ರಾಜ್ಯ, ಕೇಂದ್ರ ಸರಕಾರಗಳ ವಿರುದ್ಧ ಸಿಪಿಐಎಂ ಪ್ರತಿಭಟನೆ

ಮಂಗಳೂರು ಎಪ್ರಿಲ್ 16 : ಪೆಟ್ರೋಲ್ ಡೀಸೆಲ್, ಹಾಲು, ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ವಿರುದ್ಧ ಸಿಪಿಐಎಮ್ ಪಕ್ಷದ ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ನೇತೃತ್ವದಲ್ಲಿ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಯಿತು.
ಸಿಪಿಐಎಮ್ ಜಿಲ್ಲಾ ಸಮಿತಿ ಸದಸ್ಯರೂ, ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡುತ್ತಾ ಕೇಂದ್ರದ ನರೇಂದ್ರ ಮೋದಿ ಸರಕಾರ ಅಚ್ಛೇ ದಿನ ತರುತ್ತೇವೆ ಭ್ರಮೆ ಹುಟ್ಟಿಸಿ ಮೂರನೇ ಅವಧಿಗೆ ಅಧಿಕಾರಕ್ಕೇರಿದರೂ ದೇಶದ ಆರ್ಥಿಕತೆಯನ್ನು ಸರಿಪಡಿಸಲು ಹೆಣಗಾಡುತ್ತಿದೆ. ಜನತೆಯ ಮೇಲೆ ಬೆಲೆ ಏರಿಕೆ ಮತ್ತು ತೆರಿಗೆಯ ಹೊರೆಯನ್ನು ಹಾಕಿದೆ ಇದರ ಪರಿಣಾಮ ದೇಶದಲ್ಲಿ ಹಸಿವು ಮತ್ತು ನಿರುದ್ಯೋಗದ ಸಮಸ್ಯೆ ಗಂಭೀರ ಹಂತವನ್ನು ತಲುಪಿದೆ. ಉಪ್ಪಿನಿಂದ ಕರ್ಪೂರದವರೆಗೆ ಎಲ್ಲಾ ರೀತಿಯ ಬೆಲೆ ಏರಿಕೆಗಳು ಜನರ ಹಿಂಡಿ ಹಿಪ್ಪೆ ಮಾಡಿದಂತಾಗಿದೆ.

ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ಕೈಯ್ಯಲ್ಲಿ ಗ್ಯಾರಂಟಿ ಯೋಜನೆಗಳನ್ನು ಕೊಟ್ಟು ಮತ್ತೊಂದು ಕೈಯಿಂದ ಕಿತ್ತು ಕೊಳ್ಳುತ್ತಿದೆ. ಹಾಲು, ತರಕಾರಿ ಬೆಲೆಗಳು ಗಗನಕ್ಕೇರಿದೆ ಮುದ್ರಾಂಕ ಶುಲ್ಕಗಳು ವಿಪರೀತ ಏರಿಕೆ ಮಾಡಿದೆ. ಬೆಲೆ ಏರಿಕೆಗೆ ಕಾರಣರಾಗಿರುವ ಬಿಜೆಪಿ, ಕಾಂಗ್ರೆಸ್ ಸರಕಾರಗಳು ಪರಸ್ಪರ ರಾಜಕೀಯ ಕೆಸೆರೆರೆಚಾಟದಲ್ಲಿ ತೊಡಗಿದೆಯೇ ಹೊರತು ಏರಿದ ಬೆಲೆ ಇಳಿಕೆ ಮಾಡಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದರು. ಸಿಪಿಐಮ್ ಪಕ್ಷದ ಮುಖಂಡರಾದ ಮಾಜಿ ಕಾಪೋರೇಟರ್ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಶ್ರೀನಾಥ್ ಕುಲಾಲ್ ಮಾತನಾಡಿದರು.