LATEST NEWS
ವಿವಾದಿತ ಮರಕಡ ಟಿಡಿಆರ್ ಜಮೀನಿಗೆ ಸಿಪಿಐಎಂ ನಿಯೋಗ ಭೇಟಿ, ಹೋರಾಟ ಮುಂದುವರಿಸಲು ನಿರ್ಧಾರ
ಮಂಗಳೂರು, ಆಗಸ್ಟ್ 06: ವಿವಾದಿತ ಮರಕಡ ಟಿಡಿಆರ್ ಜಮೀನಿಗೆ ಸಿಪಿಐಎಂ ನಿಯೋಗ ಭೇಟಿ, ಹೋರಾಟ ಮುಂದುವರಿಸಲು ನಿರ್ಧಾರಿಸಿದೆ.
ಬಿಜೆಪಿ ಆಡಳಿತದ ಮಂಗಳೂರು ನಗರ ಪಾಲಿಕೆ ಭ್ರಷ್ಟಾಚಾರ, ಹಗರಣಗಳ ಕೂಪ. ಬಲಾಢ್ಯ ರಿಯಲ್ ಎಸ್ಟೇಟ್, ಬಿಲ್ಡರ್ ಲಾಭಿಗಳ ಮೂಗಿನ ನೇರಕ್ಕೆ ಎಲ್ಲವೂ ನಡೆಯುತ್ತಿದೆ. ರಿಯಲ್ ಎಸ್ಟೇಟ್ ಲಾಭಿಗಳ ಹಿತಾಸಕ್ತಿಗಳಿಗೆ ಪೂರಕವಾಗಿ ಟಿಡಿಆರ್ ನೀಡಿ ಜಮೀನು ಖರೀದಿಸುವುದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ. ಆ ಮೂಲಕ ನಗರ ಪಾಲಿಕೆಯ ನೂರಾರು ಕೋಟಿ ಆದಾಯ ಬಿಲ್ಡರ್ ಲಾಭಿಗಳ ಖಜಾನೆ ಸೇರುತ್ತಿದೆ. ಇತ್ತೀಚೆಗಂತೂ ಹತ್ತಾರು ಎಕರೆ ನಿರುಪಯೋಗಿ ಜಮೀನು ಟಿಡಿಆರ್ ಅಡಿ ಖರೀದಿಸುವುದು ಯಾವ ಮುಲಾಜೂ ಇಲ್ಲದೆ ನಡೆಯುತ್ತಿದೆ.
ಕಳೆದ ಕೌನ್ಸಿಲ್ ನಲ್ಲಿ ಬಡವರಿಗೆ ವಸತಿ ನಿರ್ಮಿಸಲು ಜಮೀನು ಖರೀದಿಸುವ ನೆಪ ಮುಂದಿಟ್ಟು ಬಲಾಢ್ಯ ರಿಯಲ್ ಎಸ್ಟೇಟ್ ಮಾಲಕರಿಗೆ ಸೇರಿದ ಹತ್ತು ಎಕರೆಗೂ ಹೆಚ್ಚು ನಿರುಪಯೋಗಿ ಜಮೀನು ಖರೀದಿಸುವ ಪ್ರಸ್ತಾಪವನ್ನು ನಾಗರಿಕ ಸಂಘಟನೆಗಳ ವಿರೋಧದ ನಡುವೆ, ವಿರೋಧ ಪಕ್ಷ ಕಾಂಗ್ರೆಸ್ ನ ನಗರ ಪಾಲಿಕೆ ಸದಸ್ಯರ ಮೌನ ಬೆಂಬಲದೊಂದಿಗೆ ಬಿಜೆಪಿ ಆಡಳಿತದ ಪಾಲಿಕೆ ಅಂಗೀಕರಿಸಿತ್ತು. (ಈ ಜಮೀನು ಬಡವರ ವಸತಿ ಯೋಜನೆಗೆ ಪೂರಕ ಅಲ್ಲ ಎಂದು ಅಧಿಕಾರಿಗಳು ಈಗಾಲಗೆ ಟಿಪ್ಪಣಿ ನೀಡಿರುತ್ತಾರೆ) ಇದು ದೊಡ್ಡ ಹಗರಣ. ಪಾಲಿಕೆಗೆ ನೂರು ಕೋಟಿ ರೂಪಾಯಿ ನಷ್ಟ ಆಗುತ್ತದೆ ಎಂದು ನಾವು ಅಪಾದಿಸಿದ್ದೆವು. ಈ ಟಿಡಿಆರ್ ಫೈಲ್ ದೊಡ್ಡ ವಿವಾದ ಹಟ್ಟು ಹಾಕಿದೆ.
ಮರಕಡ ಗ್ರಾಮದಲ್ಲಿರುವ ಆ ವಿವಾದಾತ್ಮಕ ಜಮೀನಿಗೆ ಇಂದು ಸಿಪಿಐಎಂ ಮುಖಂಡರ ನಿಯೋಗ ಭೇಟಿ ನೀಡಿ ಪರಿಶೀಲಿಸಿತು. ಉದ್ದಕ್ಕೂ ಇಳಿಜಾರು, ಕಂದಕ ಸ್ವರೂಪದಲ್ಲಿರುವ ಜಮೀನು ವಸತಿ ಯೋಜನೆಗೆ ಸಿದ್ದಪಡಿಸುವುದು ತೀರಾ ದುಬಾರಿ ಬಾಬತ್ತು ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಅದರಲ್ಲೂ ಸಿರಿವಂತರ ಪಾದಸೇವೆಯಲ್ಲಿಯೇ ಸ್ವರ್ಗ ಕಾಣುವ, ಹತ್ತಾರು ವರ್ಷಗಳಲ್ಲಿ ಬಡವರಿಗೆ ಒಂದು ಸಿಂಗಲ್ ಮನೆಯನ್ನೂ ಕಟ್ಟಿಕೊಡದ ಮಂಗಳೂರು ನಗರ ಪಾಲಿಕೆ ಈ ಕಂದಕದಂತಹ ಜಮೀನನ್ನು ಹತ್ತಾರು ಕೋಟಿ ಖರ್ಚು ಮಾಡಿ ನಡವರ ವಸತಿ ಯೋಜನೆಗೆ ಸಿದ್ದಪಡಿಸುವುದು ಕನಸಿನ ಮಾತೇ ಸರಿ. ಉಚಿತ ವಸತಿ ಯೋಜನೆಗೆ ತೀರಾ ದುಬಾರಿಯಾಗಬಲ್ಲ ಈ ಜಮೀನು ದಶಕಗಳ ಕಾಲ ಪಾಲು ಬೀಳುವುದು ಖಂಡಿತಾ. ಇದು ಬಿಲ್ಡರ್ ಗಳಿಗೆ ನಗರದ ಆಯಕಟ್ಟಿನ ಜಾಗದಲ್ಲಿ ನಿರ್ಮಾಣಹಂತದಲ್ಲಿರುವ ಅವರ ಗಗನ ಚುಂಬಿ ವಸತಿ ಸಂಕೀರ್ಣಗಳಿಗೆ ಟಿಡಿಆರ್ ಸರ್ಟಿಫಿಕೇಟ್ ಗಳನ್ನು ಒದಗಿಸಲಿಕ್ಕಾಗಿ ಮಾಡಿಕೊಂಡಿರುವ ಕೋಟ್ಯಾಂತರ ರೂಪಾಯಿಗಳ”ಡೀಲ್” ಎಂಬುದು ಈ ಜಮೀನು ನೋಡಿದ ಯಾರಿಗಾದರೂ ಅರ್ಥವಾಗುತ್ತದೆ.
ಬಿಜೆಪಿ ಆಡಳಿತದ ಮರಕಡದ ವಿವಾದಾತ್ಮಕ ಜಮೀನಿನ ಟಿಡಿಆರ್ ಡೀಲ್ ಅನ್ನು ಕೈ ಬಿಡಬೇಕು ಎಂದು ಸಿಪಿಐಎಂ ಮಂಗಳೂರು ನಗರ ಉತ್ತರ ಸಮಿತಿ ಇಂದು ಜಮೀನು ವೀಕ್ಷಿಸಿದ ತರುವಾಯ ಮಂಗಳೂರು ನಗರ ಪಾಲಿಕೆಯನ್ನು ಆಗ್ರಹಿಸಿತು. ಹಾಗೆಯೆ, ಸಮಾನ ಮನಸ್ಕ ಸಂಘಟನೆಗಳ ಜೊತೆ ಸೇರಿ ಟಿಡಿಆರ್ ಹಗರಣದ ವಿರುದ್ದ ಪ್ರಬಲ ಹೋರಾಟ ಸಂಘಟಿಸುವುದಾಗಿ ತೀರ್ಮಾನಿಸಿತು.
ನಿಯೋಗದಲ್ಲಿ ಸಿಪಿಐಎಂ ಜಿಲ್ಲಾ ಮುಖಂಡರಾದ ಮುನೀರ್ ಕಾಟಿಪಳ್ಳ, ಡಾ ಕೃಷ್ಣಪ್ಪ ಕೊಂಚಾಡಿ, ಮಂಗಳೂರು ನಗರ ಉತ್ತರ ಸಮಿತಿ ಕಾರ್ಯದರ್ಶಿ ಪ್ರಮೀಳಾ ಕೆ, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಶ್ರೀನಾಥ್ ಕುಲಾಲ್, ನ್ಯಾಯವಾದಿ ಚರಣ್ ಶೆಟ್ಟಿ ಪಂಜಿಮೊಗರು ಉಪಸ್ಥಿತರಿದ್ದರು.