LATEST NEWS
ಲೆಕ್ಕ ತೋರಿಸಲು ಕಣಚೂರು ಮೆಡಿಕಲ್ ಕಾಲೇಜಿಗೆ ಗ್ರಾಮೀಣ ಮಹಿಳೆಯರ ಸಾಗಾಟ – ಲಾಕ್‌ಡೌನ್ ನಿಯಮ ಉಲ್ಲಂಘನೆ ಕೇಸು ದಾಖಲು
ಮಂಗಳೂರು: ರಾತ್ರಿ ಕರ್ಪ್ಯೂ ಸಂದರ್ಭ ಗ್ರಾಮೀಣ ಮಹಿಳೆಯರನ್ನು ಮೆಡಿಕಲ್ ಕಾಲೇಜಿನ ಬಸ್ ಒಂದರಲ್ಲಿ ಸಾಗಾಟ ಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಕಾರಣ ಲಾಕ್‌ಡೌನ್ ನಿಯಮ ಉಲ್ಲಂಘನೆಯಡಿ ಕೇಸು ದಾಖಲಾಗಿದೆ.
ಈ ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಮುಲ್ಕಿ ಲಿಂಗಪ್ಪಯ್ಯ ಕಾಡು ಎಂಬಲ್ಲಿ ಕಣಚೂರು ಸಮೀಪದ ಮೆಡಿಕಲ್ ಕಾಲೇಜು ಆಸ್ಪತ್ರೆಯೊಂದಕ್ಕೆ ಸೇರಿದ ಖಾಸಗಿ ಬಸ್ಸಿನಲ್ಲಿ ಸೋಮವಾರ ರಾತ್ರಿ 8.15ರ ಸುಮಾರಿಗೆ ಯಾವುದೇ ಸುರಕ್ಷಿತ, ಸಾಮಾಜಿಕ ಅಂತರವಿಲ್ಲದೆ ಮಹಿಳೆಯರನ್ನು ಹತ್ತಿಸಿಕೊಂಡು ಸಂಚಾರಕ್ಕೆ ಯತ್ನಿಸಿದ್ದರು.
ಬಸ್‌ನಲ್ಲಿ ಚಾಲಕ ಮತ್ತು ಆಸ್ಪತ್ರೆಯ ನರ್ಸ್ ಮಾತ್ರ ಇದ್ದರು. ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಜನಪ್ರತಿನಿಧಿ ಸೇರಿದಂತೆ ಹಾಗೂ ಸ್ಥಳೀಯರು ವಿಚಾರಿಸಿದ್ದು, ಆಸ್ಪತ್ರೆಯ ಮ್ಯಾನೇಜರ್ ಸೂಚನೆ ಮೇರೆಗೆ ಲಸಿಕೆಗಾಗಿ ಅವರನ್ನು ಕರೆದೊಯ್ಯುತ್ತಿರುವುದಾಗಿ ಬಸ್ಸಿನ ಚಾಲಕ ತಿಳಿಸಿದ್ದಾನೆ.
ಆದರೆ ರಾತ್ರಿ ಹೊತ್ತು ಲಸಿಕೆ ನೀಡಲಾಗುತ್ತದೆಯೇ ಎಂದು ಸ್ಥಳೀಯರು ಪ್ರಶ್ನಿಸಿ ಆಕ್ಷೇಪ ವ್ಯಕ್ತಪಡಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದರು.
ಚಾಲಕ ಹಾಗೂ ಬಸ್ಸಿನಲ್ಲಿದ್ದ ಇನ್ನೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಮೆಡಿಕಲ್ ಕಾಲೇಜಿಗೆ ಅಧಿಕಾರಿಗಳು ಪರಿಶೀಲನೆಗೆ ಬರುವ ವೇಳೆ ಲೆಕ್ಕ ಭರ್ತಿ ತೋರಿಸಲು ಗ್ರಾಮೀಣ ಭಾಗದ ಅಮಾಯಕ ಮಹಿಳೆಯನ್ನು ಕರೆದೊಯ್ಯುತ್ತಿರುವುದಾಗಿ ತಿಳಿದು ಬಂದಿದೆ. ಅನುಮಾನಾಸ್ಪದವಾಗಿ ರಾತ್ರಿ ಹೊತ್ತು ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಸಂಚಾರಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.