LATEST NEWS
ವೈದ್ಯನೆಂದು ಹೇಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ಹಣ್ಣಿನ ವ್ಯಾಪಾರಿ!

ನಾಗ್ಪುರ, ಮೇ 09 : ವೈದ್ಯನೆಂದು ಸುಳ್ಳು ಹೇಳಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಹಣ್ಣಿನ ವ್ಯಾಪಾರಿಯೊಬ್ಬನನ್ನು ಮಹಾರಾಷ್ಟ್ರದ ನಾಗ್ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ನಾಗ್ಪುರದ ಕಾಮತಿ ಪ್ರದೇಶದ ಚಂದನ್ ರಮೇಶ್ ಚೌಧರಿ ಎಂಬಾತನೇ ಈ ಕಿಲಾಡಿ. ಈತ ಹಣ್ಣು ಮತ್ತು ಐಸ್ ಕ್ರೀಮ್ ವ್ಯಾಪಾರ ಮಾಡುತ್ತಿದ್ದ. ನಂತರ ಇಲೆಕ್ಟ್ರೀಷಿಯನ್ ಆಗಿಯೂ ಕೆಲಸ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಚಂದನ್ ಚೌಧರಿಯೂ ಓಂ ನಾರಾಯಣ ವಿವಿದೋದ್ಧೇಶ ಸಮಾಜ ಎಂಬ ದತ್ತಿ ಔಷಧಾಲಯವನ್ನೂ ನಡಸುತ್ತಿದ್ದ. ಅಲ್ಲಿ ಕಳೆದ ಐದು ವರ್ಷಗಳಿಂದ ಆಯುರ್ವೇದ ಪ್ರಕೃತಿ ಚಿಕಿತ್ಸೆ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆತನೊಂದಿಗೆ ಪರಿಚಯದ ವ್ಯಕ್ತಿಯೊಬ್ಬರು ಜಿಲ್ಲಾ ಪೊಲೀಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮಾಹಿತಿ ಪಡೆದ ನಂತರ ಪೊಲೀಸರು ಚಂದನ್ ನರೇಶ್ ಚೌಧರಿಯ ಔಷಧಾಲಯಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಈತ ನಕಲಿ ವೈದ್ಯ ಎಂದು ಸಾಬೀತಾಗಿದೆ.
ಆತನ ಔಷಧಾಲಯದಿಂದ ಆಮ್ಲಜನಕ ಸಿಲಿಂಡರ್‌ಗಳು, ಸಿರಿಂಜುಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.