Connect with us

DAKSHINA KANNADA

ವರದಿ ಮಾಡಲು ತೆರಳಿದ್ದ ಪತ್ರಕರ್ತನಿಗೇ ಕೋರ್ಟ್ ಸಮನ್ಸ್

ಮಂಗಳೂರು, ಸೆಪ್ಟೆಂಬರ್ 11: ವರದಿ ಮಾಡಲು ತೆರಳಿದ್ದ ಪತ್ರಕರ್ತನಿಗೇ ನ್ಯಾಯಾಲಯದಲ್ಲಿ ಸಾಕ್ಷೀ ಹೇಳಬೇಕಾದ ಸನ್ನಿವೇಶ ಮಂಗಳೂರಿನ   ಪತ್ರಕರ್ತನಿಗೆ ಬಂದಿದೆ. ಮಂಗಳೂರಿನಿಂದ ಬಯಲು ಪ್ರದೇಶಗಳಾದ  ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಕರಾವಳಿಯ ಜೀವನದಿಯಾದ ನೇತ್ರಾವತಿಯ ನೀರನ್ನು ಕೊಂಡೊಯ್ಯಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿತ್ತು.

2015 ರಲ್ಲಿ  ನೇತ್ರಾವತಿ ನದಿಯ ಉಗಮ ಸ್ಥಾನವಾದ ಎತ್ತಿನಹೊಳೆಯಲ್ಲಿ ಹರಿಯುವ ನದಿಗೆ ಅಣೆಕಟ್ಟುಗಳನ್ನು ಕಟ್ಟಿ ಆ ನೀರನ್ನು ಕೊಂಡೊಯ್ಯಲು ಈ ಯೋಜನೆ ಆರಂಭಿಸಲಾಗಿದ್ದು, ಇದರಿಂದ ಕರಾವಳಿ ಭಾಗದಲ್ಲಿ ತೀವ್ರ ಜಲಕ್ಷಾಮವಾಗುವ ಆತಂಕ ಇದ್ದುದ್ದರಿಂದ ಈ  ಯೋಜನೆಗೆ ಕರಾವಳಿ ಭಾಗದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪರಿಣಾಮ ಅಲ್ಲಲ್ಲಿ ವಿವಿಧ ಸಂಘಟನೆಗಳು, ಪರಿಸರ ವಾದಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳೂ ಬೀದಿಗಳಿದು ಪ್ರತಿಭಟನೆ, ಹೋರಾಟಗಳು ನಡೆಸಿದ್ದರು. ಇಂತಹ ಸಾರ್ವಜನಿಕ ಪ್ರತಿಭಟನೆಯೊಂದರ ವರದಿ ಮಾಡಲು ಹೋದ ಸ್ಥಳೀಯ ಪತ್ರಕರ್ತನಿಗೆ ಇದೀಗ ಸಾಕ್ಷಿ ಹೇಳಲು ಕೋರ್ಟ್ ಅಲೆಯಬೇಕಾಗಿ ಬಂದಿದೆ.

ಉದಯವಾಣಿ ಪತ್ರಿಕೆಯ ಸುರತ್ಕಲ್ ಭಾಗದ ವರದಿಗಾರನಾದ ಲಕ್ಷ್ಮೀ ನಾರಾಯಣ ಎಂಬ ಪತ್ರಕರ್ತನಿಗೆ  ಮಂಗಳೂರಿನ ಮೂರನೇ ಜೆ ಎಮ್ ಎಫ್ ಸಿ ನ್ಯಾಯಾಲಯ ಸಾಕ್ಷಿ ಹೇಳಲು ಸಮನ್ಸ್ ಜಾರಿಮಾಡಿದೆ.

ಅಂದು ಹೋರಾಟ ನೇತ್ರತ್ವ ವಹಿಸಿದ್ದ ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ ಅವರ ಮೇಲಿನ ಮೊಕದ್ದಮೆಯ ಕುರಿತು ಲಕ್ಷ್ಮೀ ನಾರಾಯಣ ಅವರು ಕೋರ್ಟಿನಲ್ಲಿ ಸಾಕ್ಷಿ ಹೇಳಬೇಕಿದೆ.ಇದೇ ಸೆಪ್ಟೆಂಬರ್ 12 ರಂದು ಲಕ್ಷ್ಮೀ ನಾರಾಯಣ ಅವರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿಯಬೇಕೆಂದು ಮಾನ್ಯ ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಪತ್ರಕರ್ತ ಲಕ್ಮೀ ನಾರಾಯಣ  2015ರಲ್ಲಿ ನೇತ್ರಾವತಿ ಹೋರಾಟದ ವರದಿ ಮಾಡಿದಕ್ಕೆ ಪೊಲೀಸ್ ಇಲಾಖೆ ಹೆಸರನ್ನು ಪ್ರತಿಭಟನೆಯ ಪ್ರಕರಣದಲ್ಲಿ ನಮೂದಿಸಿದೆ. ಆದರೆ ಪೋಲಿಸ್ ಅಧಿಕಾರಿಗಳು ಕನಿಷ್ಟ ಸೌಜನ್ಯಕ್ಕೂ ಈ ಬಗ್ಗೆ ವಿಚಾರಿಸದಿರುವುದು ಅಥವಾ ಗಮನಕ್ಕೆ ತರದಿರುವುದು ಖೇದಕರ ವಿಷಯ.

ಇದನ್ನು ಶಿಕ್ಷೆ ಎಣಿಸ ಬೇಕೊ, ಅಥವಾ ಕಿರುಕುಳ ಎಣಿಸ ಬೇಕೊ, ಕನಿಷ್ಟ ಸಾಕ್ಷಿ ಹೇಳುವಿರಾ ಎಂದು ಅನುಮತಿ ಕೇಳುವಷ್ಟು ಸೌಜನ್ಯ ಇಲಾಖೆಯಲ್ಲಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *