DAKSHINA KANNADA
ರಕ್ತದಾನ ಬಗ್ಗೆ ಜಾಗೃತಿಗಾಗಿ ಕರ್ನಾಟಕದಿಂದ ಕಾರ್ಗಿಲ್‌ಗೆ ದಂಪತಿ ಬೈಕ್ ರೈಡ್

ಮಂಗಳೂರು, ಜುಲೈ 28: ರಕ್ತದಾನದ ಮಹತ್ವ, ಜನ ಜಾಗೃತಿಗಾಗಿ ದಂಪತಿ ಮಂಗಳೂರಿನಿಂದ ಇದೇ ಮೊದಲ ಬಾರಿಗೆ ಬೈಕ್ ಪ್ರಯಾಣದ ಮೂಲಕ ಕಾರ್ಗಿಲ್‌ಗೆ ತೆರಳಲಿದ್ದಾರೆ.
ಮಂಗಳೂರಿನ ಸೈಫ್ ಸುಲ್ತಾನ್ ಮತ್ತು ಪತ್ನಿ ಅದೀಲಾ ಫರ್ಹಾನ್ ಜೊತೆಯಾಗಿ ಬೈಕ್ ಮೂಲಕ ತಮ್ಮ ಯಾತ್ರೆಯನ್ನು ಜು. 29ರಂದು ಮಂಗಳೂರಿನಿಂದ ಶುರು ಮಾಡಿ ಆ. 15ರ ಸ್ವಾತಂತ್ರ್ಯ ದಿನಾಚರಣೆಯಂದು ಕಾರ್ಗಿಲ್‌ನಲ್ಲಿ ಸಮಾಪನ ಮಾಡಲಿದ್ದಾರೆ.

ಈ ವೇಳೆ ಅವರು ದೇಶದಾದ್ಯಂತ ರಕ್ತದಾನ, ದೇಶಭಕ್ತಿ, ದೇಶಪ್ರೇಮ, ಹಿಜಾಬ್ ಕುರಿತ ಮಹತ್ವ ಸೇರಿದಂತೆ ಈ ಎಲ್ಲಾ ವಿಚಾರದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ಮಂಗಳೂರಿನ ನೆಹರೂ ಮೈದಾನದಲ್ಲಿ ಜು. 29ರಂದು ಬೆಳಿಗ್ಗೆ 7.30ಕ್ಕೆ ಸ್ಪೀಕರ್ ಯುಟಿ ಖಾದರ್ ಮತ್ತು ಮಂಗಳೂರು ನಗರ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅವರು ಭಾರತ ದ್ವಜವನ್ನು ನೀಡುವ ಮೂಲಕ ಇವರ ಯಾತ್ರೆ ಆರಂಭಗೊಳ್ಳಲಿದೆ.
ಜು. 28ರಂದು ಇದರ ಪೂರ್ವಭಾವಿಯಾಗಿ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ, ರೆಡ್ ಕ್ರಾಸ್ ಬ್ಲಡ್ ಬ್ಯಾಂಡ್ ಈ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಲಿದೆ. ಈ ಬಗ್ಗೆ ವಾಹಿನಿಗೆ ಪ್ರತಿಕ್ರಿಯೆ ನೀಡಿದ ಸೈಫ್ ಸುಲ್ತಾನ್, ಇದು ನಮಗೆ ಖುಷಿಯ ಕ್ಷಣವಾಗಿದೆ.
ಇದೇ ಮೊದಲ ಬಾರಿಗೆ ನಾನು ಪತ್ನಿ ಜೊತೆ ಕರ್ನಾಟಕದಿಂದ ಕಾರ್ಗಿಲ್‌ಗೆ ಜಾಗೃತಿಗಾಗಿ ಬೈಕ್‌ನಲ್ಲಿ ಹೊರಟಿದ್ದೇವೆ. ಇಲ್ಲಿಂದ ಭಾರತದ ಧ್ವಜ ಪಡೆದು ಅದನ್ನು ಕಾರ್ಗಿಲ್‌ನಲ್ಲಿ ಕರ್ನಲ್ ಅಭಿಮನ್ಯುವಿಗೆ ಮುಟ್ಟಿಸಲಿದ್ದೇವೆ. ಅವರು ಆ. 15ರಂದು ಸ್ವಾತಂತ್ರ್ತ ದಿನಾಚರಣೆ ದಿನ ಧ್ವಜಾರೋಹಣ ಮಾಡಲಿದ್ದಾರೆ.
3800 ಕಿಲೋ ಮೀಟರ್ ನಮ್ಮ ಯಾತ್ರೆ ನಡೆಯಲಿದ್ದು, ಒಟ್ಟು 17 ದಿನಗಳ ಪಯಣದಲ್ಲಿ 13 ಕಡೆಗಳಲ್ಲಿ ಉಳಿದುಕೊಳ್ಳಲಿದ್ದೇವೆ. ಬಿಎಂಡಬ್ಲ್ಯೂ ಜಿಎಸ್ 310ನಲ್ಲಿ ನಾವು ಹೊರಡಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು. ಬೈಕ್ ಜಾಗೃತಿ ಜಾಥ ಹೊರಟಿದ್ದಕ್ಕಾಗಿ ಅದೀಲಾ ಫರ್ಹಾನ್ ಕೂಡಾ ಹರ್ಷ ವ್ಯಕ್ತಪಡಿಸಿದರು.
ಇನ್ನು ದಂಪತಿ ಪ್ರವಾಸದ ಬೈಕ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜವಾದ್ ಅಹಮ್ಮದ್ ಪ್ರತಿಕ್ರಿಯೆ ನೀಡಿ, ಟೂರ್ ಮಾಡುವುದಕ್ಕೋಸ್ಕರ ಯಾವುದೇ ತೊಂದರೆ ಆಗದಂತೆ ನಾವು ನಿರ್ವಹಣೆ ಮಾಡಿದ್ದೇವೆ. ಗಾಡಿಯಲ್ಲಿ ಅವರಿಗೆ ಬೇಕಾದ ಸೊತ್ತುಗಳನ್ನು ಎಕ್ಸ್‌ಟ್ರಾ ಇಟ್ಟಿದ್ದೇವೆ ಎಂದಿದ್ದಾರೆ.