LATEST NEWS
ಜನವರಿ 16 ರಿಂದ ಕೊರೊನಾ ಲಸಿಕೆ ವಿತರಣೆ ಆರಂಭ
ನವದೆಹಲಿ ಜನವರಿ 9: ಕೊನೆಗೂ ಮಹಾಮಾರಿ ಕೊರೊನಾ ಗೆ ಲಸಿಕೆ ವಿತರಣೆ ಕಾರ್ಯ ಆರಂಭವಾಗಲಿದ್ದು, ಭಾರತ ಮಹಾಮಾರಿ ಕೊರೋನಾ ವೈರಸ್ ಗೆ ದೇಶಿಯವಾಗಿ ಎರಡು ಕೊರೋನಾ ಲಸಿಕೆ ತಯಾರಿಕೆ ಮಾಡಿದ್ದು, ಜನವರಿ 16 ರಿಂದ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಆರಂಭವಾಗಲಿದೆ ಎಂದು ಶನಿವಾರ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ವೈರಸ್ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಆರೋಗ್ಯ ಸಚಿವಾಲಯ ಈ ಪ್ರಕಟಣೆ ನೀಡಿದ್ದು, ಮೊದಲು ಸುಮಾರು 3 ಕೋಟಿ ಮುಂಚೂಣಿ ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದೆ.
ನಂತರ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 50 ವರ್ಷದೊಳಗಿನ ಸುಮಾರು 27 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಪ್ರಧಾನಿ ಮೋದಿ ಅವರು ಕೋವಿಡ್ ಲಸಿಕೆಗಾಗಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿಕೊಂಡಿರುವ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ವರ್ಚ್ಯುವಲ್ ಸಭೆ ನಡೆಸಿದರು. ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ, ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.