LATEST NEWS
ಕರೋನಾ ಭೀತಿ ನವಮಂಗಳೂರು ಬಂದರಿನಲ್ಲಿ ತೀವ್ರ ಕಟ್ಟೆಚ್ಚರ
ಕರೋನಾ ಭೀತಿ ನವಮಂಗಳೂರು ಬಂದರಿನಲ್ಲಿ ತೀವ್ರ ಕಟ್ಟೆಚ್ಚರ
ಮಂಗಳೂರು ಫೆಬ್ರವರಿ 5: ಈಗಾಗಲೇ ಚೀನಾದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಭೀತಿ ಈಗ ರಾಜ್ಯಕ್ಕೂ ಎದುರಾಗಿದೆ. ಕರ್ನಾಟಕದ ಗಡಿ ಜಿಲ್ಲೆಯಾದ ಕಾಸರಗೋಡಿನಲ್ಲಿ ಕರೋನಾ ಪ್ರಕರಣ ಪತ್ತೆಯಾದ ನಂತರ ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಅತೀ ಹೆಚ್ಚು ವಿದೇಶಿ ಪ್ರವಾಸಿಗರು ಬರುವ ಮಂಗಳೂರು ಬಂದಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಇದರಂತೆ ವಿದೇಶದಿಂದ ಬರುತ್ತಿರುವ ಪ್ರತೀ ಪ್ರವಾಸಿಗರನ್ನೂ ತಪಾಸಣೆ ನಡೆಸುವಂತೆ ಕೇಂದ್ರ ಬಂದರು ಸಚಿವಾಲಯ ತನ್ನ ಅಧೀನದ ಎಲ್ಲಾ ಬಂದರುಗಳಿಗೆ ಸೂಚನೆ ನೀಡಿದೆ.
ಮಂಗಳೂರಿನ ನವಮಂಗಳೂರು ಬಂದರಿಗೆ ಪ್ರತಿ ವರ್ಷ ಸಾವಿರಾರು ವಿದೇಶಿ ಪ್ರವಾಸಿಗರು ಐಷಾರಾಮಿ ಹಡಗುಗಳಲ್ಲಿ ಆಗಮಿಸುತ್ತಿದ್ದಾರೆ. ಈ ವರ್ಷದಲ್ಲೇ 12 ಐಷರಾಮಿ ಹಡಗು ಸಾವಿರಾರು ಪ್ರವಾಸಿಗರನ್ನು ಹೊತ್ತು ತಂದಿದೆ.
ಕರೋನಾ ಬೀತಿ ಹಿನ್ನಲೆ ಕೇಂದ್ರ ಸರಕಾರ ಎಲ್ಲಾ ಪ್ರವಾಸಿಗರ ತಪಾಸಣೆಯ ಬಳಿಕವಷ್ಟೇ ನಗರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದ್ದು, ಎಲ್ಲರಿಗೂ ಕೊರೋನಾ ಸೋಂಕು ತಡೆಗಟ್ಟುವ ಎನ್-95 ಮಾಸ್ಕ್ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ನಡುವೆ ಮುಂಜಾಗ್ರತಾ ಕ್ರಮವಾಗಿ ಎನ್ಎಂಪಿಟಿ ಸಿಬ್ಬಂದಿಯೂ ಕೂಡ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದು, ಈ ಕಾರ್ಯಕ್ಕಾಗಿಯೇ ಬಂದರು ಪ್ರದೇಶಗಳಲ್ಲಿ ಹೆಚ್ಚುವರಿಯಾಗಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಮಂಗಳವಾರ ಎನ್ಎಂಪಿಟಿಗೆ ಪ್ರವಾಸಿ ಹಡಗೊಂದು ಬಂದಿಳಿದಿದ್ದು, 1,841 ಪ್ರವಾಸಿಗರು ಹಾಗೂ 794 ಸಿಬ್ಬಂದಿಗಳು ಬಂದಿದ್ದು, ಹಡಗು ಇಟಲಿ ಮೂಲದ್ದಾಗಿತ್ತು ಎಂದು ಹೇಳಲಾಗುತ್ತಿದೆ. ಇದರಂತೆ ಎಲ್ಲಾ ಪ್ರವಾಸಿಗರನ್ನೂ ತಪಾಸಣೆಗೊಳಪಡಿಸಲಾಗಿದೆ. ಹಡಗಿನಲ್ಲಿ ಚೀನಾದ ಸಿಬ್ಬಂದಿಗಳೂ ಕಂಡು ಬಂದಿದ್ದಾರೆ.
ಮಂಗಳೂರಿಗೆ ಹಡಗು ಬಂದಿಳಿಯುತ್ತಿದ್ದಂತೆಯೇ ಪ್ರವಾಸಿಗರನ್ನು ತಪಾಸಣೆ ನಡೆಸಲಾಗಿತ್ತು. ಸ್ಥಳದಲ್ಲಿ ವಿಶೇಷ ಕೊಠಡಿಯ ವ್ಯವಸ್ಥೆ ಮಾಡಲಾಗಿತ್ತು. ತಪಾಸಣೆ ನಡೆಸಿದ ಪ್ರವಾಸಿಗರ ಮಾಹಿತಿಗಳನ್ನು ನಮೂದಿಸಲಾಗುತ್ತಿದೆ. ತಪಾಸಣೆ ವೇಳೆ ಯಾರೊಬ್ಬರಲ್ಲೂ ಕೊರೋನಾ ವೈರಸ್ ಪತ್ತೆಯಾಗಿಲ್ಲ ಎಂದು ಬಂದರು ಪ್ರದೇಶದ ಆರೋಗ್ಯ ಸಂಸ್ಥೆಯ ವೈದ್ಯಕೀಯ ಅಧಿಕಾರಿ ಡಾ.ಜಾಸೊನ್ ಮ್ಯಾಥ್ಯೂ ಅವರು ಹೇಳಿದ್ದಾರೆ.