LATEST NEWS
ದೇಶದ ವಿವಿಧ ರಾಜ್ಯಗಳತ್ತ ಹೊರಟ ಕೊರೊನಾ ಲಸಿಕೆ ಹೊತ್ತ ಟ್ರಕ್ ಗಳು…!!
ಪುಣೆ: ಕೊರೊನಾ ಮಹಾಮಾರಿಯ ವಿರುದ್ದ ಭಾರತದ ಕೊನೆಯ ಹಂತದ ಹೋರಾಟ ನಡೆಯುತ್ತಿದ್ದು, ಕೊರೊನಾ ಮಹಾಮಾರಿಯನ್ನು ಮಣಿಸಲು ದೇಶದಲ್ಲಿ ತಯಾರಾದ ಕೋವಿಶೀಲ್ಡ್ ಲಸಿಕೆಯ ವಿತರಣೆ ಕಾರ್ಯ ಜನವರಿ 16 ರಿಂದ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಹೊತ್ತ ಸ್ಪೈಸ್ ಜೆಟ್ ವಿಮಾನ ದೆಹಲಿಗೆ ಹೊರಟಿದ್ದು, ಅದರ ಜೊತೆಗೆ ಮೂರು ಟ್ರಕ್ ಗಳಲ್ಲಿ ದೇಶದ 13 ಕಡೆಗಳಿಗೆ ಪುಣೆಯ ಸೆರಂ ಇನ್ಸ್ಟಿಟ್ಯೂಟ್ ನಿಂದ ಕೋವಿಡ್-19 ಲಸಿಕೆ ಪೂರೈಕೆಯಾಗುತ್ತಿದೆ.
ಮೊದಲ ಹಂತದ ರವಾನೆಯಲ್ಲಿ 1088 ಕೆಜಿ ತೂಕದ ಕೋವಿಶೀಲ್ಡ್ ಲಸಿಕೆ ಹೊತ್ತ 34 ಪೊಟ್ಟಣಗಳನ್ನು ಪುಣೆಯಿಂದ ದೆಹಲಿಗೆ ರವಾನಿಸಲಾಗಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ತಿಳಿಸಿದ್ದಾರೆ.
ಪುಣೆ ವಿಮಾನ ನಿಲ್ದಾಣದಿಂದ ಲಸಿಕೆಯನ್ನು ಹೊತ್ತ ಮೊದಲ ವಿಮಾನ ದೆಹಲಿಗೆ ಹೊರಡಲಿದೆ ಎಂದು ಕೋವಿಶೀಲ್ಡ್ ಲಸಿಕೆಯನ್ನು ಪುಣೆಯಿಂದ ವಿವಿಧ ವಿಮಾನ ನಿಲ್ದಾಣಗಳಿಗೆ ತಲುಪಿಸುವ ಹೊಣೆ ಹೊತ್ತಿರುವ ಎಸ್ ಬಿ ಲಾಜಿಸ್ಟಿಕ್ಸ್ ತಂಡದ ಸಂದೀಪ್ ಬೊಸಲೆ ತಿಳಿಸಿದ್ದಾರೆ.
ಒಟ್ಟು 8 ವಿಮಾನಗಳು, ಎರಡು ಕಾರ್ಗೊ ವಿಮಾನಗಳು ಮತ್ತು ಇತರ ನಿತ್ಯದ ವಾಣಿಜ್ಯ ವಿಮಾನಗಳು ಲಸಿಕೆಯನ್ನು ಹೊತ್ತೊಯ್ಯಲಿವೆ. ಇಂದು ಬೆಳಗ್ಗೆ 10 ಗಂಟೆಗೆ ಎಲ್ಲಾ ಲಸಿಕೆಗಳು ವಿತರಣೆಯಾಗಲಿವೆ.
ಕಳೆದೊಂದು ತಿಂಗಳಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ 5 ಕೋಟಿಗೂ ಅಧಿಕ ಮಂದಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ.