DAKSHINA KANNADA
ಟ್ರಾವೆಲ್ ಹಿಸ್ಟರಿ ಇಲ್ಲದ ಕೊರೊನಾ ಆತಂಕದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಜನ
ಜಿಲ್ಲಾಡಳಿತಕ್ಕೆ ಸವಾಲಾದ ಕೊರೊನಾ ಸೊಂಕಿನ ಮೂಲ
ಪುತ್ತೂರು ಜೂನ್ 6: ವಿಶ್ವವೆಲ್ಲವನ್ನೂ ಕಾಡುತ್ತಿರುವ ಕೊರೊನಾದ ಮೂಲವನ್ನು ಹುಡುಕುವುದೇ ಕೊರೊನಾ ವಾರಿಯರ್ಸ್ ಗೆ ಸವಾಲಾಗಿ ಪರಿಣಮಿಸಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಎರಡು ಕೊರೊನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಎರಡೂ ಪ್ರಕರಣಗಳ ಮೂಲ ಹುಡುಕುವುದೇ ಇದೀಗ ಜಿಲ್ಲಾಡಳಿತಕ್ಕೆ ಸವಾಲಾಗಿದೆ.
ದಕ್ಷಿಣಕನ್ನಡ ಜಿಲ್ಲೆಯು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿ ನಿವಾಸಿ 35 ವರ್ಷ ಪ್ರಾಯದ ಮಹಿಳೆ ಹಾಗೂ ಕಡಬ ತಾಲೂಕಿನ 42 ವರ್ಷ ಪ್ರಾಯದ ದೈಹಿಕ ಶಿಕ್ಷಕರೊಬ್ಬರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ. ದೈಹಿಕಿ ಶಿಕ್ಷಕರಾಗಿರುವ ಕಡಬದ ವ್ಯಕ್ತಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಎದುರಾಗಿದ್ದ ಕಾರಣಕ್ಕಾಗಿ ಈ ವ್ಯಕ್ತಿ 10 ದಿನಗಳ ಹಿಂದೆ ಮಂಗಳೂರಿನ ಆಸ್ಪತ್ರೆಗೆ ಪರೀಕ್ಷೆಗಾಗಿ ತೆರಳಿದ್ದರು. ಆ ಬಳಿಕ ಅವರು 2 ದಿನಗಳ ಹಿಂದೆ ಕಿಡ್ನಿ ಸ್ಟೋನ್ ತೆಗೆಯಲು ಅದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಈ ಸಂದರ್ಭದಲ್ಲಿ ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ವ್ಯಕ್ತಿಯಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ.
ಇನ್ನೊಂದು ಪ್ರಕರಣ ಉಪ್ಪಿನಂಗಡಿಯ ನೆಕ್ಕಿಲಾಡಿಯ ಮಹಿಳೆಯದಾಗಿದ್ದು, ಈ ಮಹಿಳೆಯಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈಕೆಯನ್ನೂ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಗಂಟಲು ದ್ರವ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ಮಹಿಳೆ ಮನೆಯಿಂದ ಹೊರ ನಡೆದಿಲ್ಲ. ಆದರೆ ಈಕೆಯ ಪತಿ ಉಪ್ಪಿನಂಗಡಿಯಲ್ಲಿ ಅಡಿಕೆ ವ್ಯಾಪಾರಿಯಾಗಿದ್ದು, ಈಕೆಗೆ ಕೊರೊನಾ ತಗುಲಿರುವ ಕಾರಣ ಏನು ಎನ್ನುವ ಹುಡುಕಾಟದಲ್ಲಿ ಇದೀಗ ಆರೋಗ್ಯ ಅಧಿಕಾರಿಗಳು ನಿರತರಾಗಿದ್ದಾರೆ.
ಅದರಲ್ಲೂ ಕಡಬದ ದೈಹಿಕ ಶಿಕ್ಷಕ ಮಂಗಳೂರಿನಲ್ಲಿ ಕಿಡ್ನಿ ಪರೀಕ್ಷೆ ನಡೆಸಿದ ಬಳಿಕ ಕೊರೊನಾ ವಿರುದ್ಧ ಆರೋಗ್ಯ ಇಲಾಖೆ ಹಮ್ಮಿಕೊಂಡಿದ್ದ ಮನೆ ಮನೆ ಜಾಗೃತಿ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ಅಲ್ಲದೆ ಕಡಬ ಪೇಟೆ ತುಂಬಾ ಈ ವ್ಯಕ್ತಿ ಓಡಾಡಿದ್ದು, ಇದೀಗ ವ್ಯಕ್ತಿಯ ಮನೆಯ ಸಮೀಪದ 7 ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಅಲ್ಲದೆ ವ್ಯಕ್ತಿ ಎಲ್ಲೆಲ್ಲಾ ತಿರುಗಾಡಿದ್ದಾರೆ ಎನ್ನುವ ಟ್ರಾವೆಲ್ ಹಿಸ್ಟರಿಯನ್ನೂ ಕಲೆ ಹಾಕುವ ಕೆಲಸದಲ್ಲಿ ಆರೋಗ್ಯ ಅಧಿಕಾರಿಗಳು ನಿರತರಾಗಿದ್ದಾರೆ.
ಈ ಎರಡೂ ಪ್ರಕರಣದಲ್ಲಿ ಕೊರೊನಾ ಸಂಪರ್ಕದ ಮೂಲ ಯಾವುದು ಎನ್ನುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದ್ದು, ಕಡಬ ಹಾಗೂ ಉಪ್ಪಿನಂಗಡಿ ಪರಿಸರದ ಜನರಲ್ಲಿ ಇದೀಗ ಆತಂಕ ಮೂಡಲಾರಂಭಿಸಿದೆ