LATEST NEWS
ಕೊರೊನಾ ಭಯಕ್ಕೆ ಹತ್ತಿರ ಬಾರದ ಜನ: ಶಿಕ್ಷಕಿಯ ಮೃತದೇಹ ಆಸ್ಪತ್ರೆಗೆ ಸಾಗಿಸಿದ ಸಮಾಜ ಸೇವಕ
ಉಡುಪಿ, ಮೇ 12; ಕೊರೊನಾ ಭೀತಿಯಿಂದಾಗಿ ಅಸೌಖ್ಯದಿಂದ ಮೃತಪಟ್ಟ ಶಿಕ್ಷಕಿಯ ಸನಿಹ ಯಾರೂ ಬಾರದೇ ಇದ್ದಾಗ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಕೆಯ ಶವವನ್ನು ತಮ್ಮ ಅಂ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು ಕುಕ್ಕಿಕಟ್ಟೆ ಇಂದಿರಾನಗರದಲ್ಲಿ ನಡೆದಿದೆ.
ಮನೆಯಲ್ಲಿದ್ದ ಒಂಟಿ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೊರೊನಾ ಎಂಬ ಶಂಕೆಯಿಂದ ಭೀತಿಗೊಳಗಾಗಿ ಜನರು ಶವದ ಸಮೀಪ ಸುಳಿಯಲು ಹಿಂದೇಟು ಹಾಕಿದ್ದಾರೆ. ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಂತೆ ತಕ್ಷಣ ಸ್ಪಂದಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ತಮ್ಮ ಆ್ಯಂಬುಲೆನ್ಸ್ ನಲ್ಲಿ ಶವಸಾಗಿಸಿ ಶವಗಾರದಲ್ಲಿ ರಕ್ಷಿಸಿ ಇಡುವ ವ್ಯವಸ್ಥೆಗೊಳಿಸಿ ಮಾನವೀಯತೆ ಮೆರೆದರು. ಯಶೋಧಾಮ ಆಟೋ ಯೂನಿಯನ್ ಕಾರ್ಯಕರ್ತರು ಈ ಕಾರ್ಯದಲ್ಲಿ ಸಹಕರಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಮೃತ ದೇಹದ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಹಿಳೆ ಸರೋಜಾ (64 ) ಒಳಕಾಡು ಅಂಗನವಾಡಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದರು. ಕೆಲವು ಸಮಯಗಳಿಂದ ಕುಕ್ಕಿಕಟ್ಟೆ ವಿದ್ಯಾರ್ಥಿ ನಿಲಯದಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದು ಬಂದಿದೆ.