LATEST NEWS
ಕೊರೊನಾ ಹೆಚ್ಚಳ: ಐಸಿಎಸ್‌ಇ 10ನೇ ತರಗತಿ ಪರೀಕ್ಷೆ ರದ್ದು
ನವದೆಹಲಿ, ಏಪ್ರಿಲ್ 20: ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್(ಐಸಿಎಸ್‌ಇ) 10ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇನ್ನು ಐಸಿಎಸ್‌ಇ 12ನೇ ತರಗತಿ ಪರೀಕ್ಷೆ ಈ ಹಿಂದಿನ ಆದೇಶದಂತೆ ನಡೆಯಲಿದ್ದು, ಪರೀಕ್ಷೆಯ ಹೊಸ ವೇಳಾಪಟ್ಟಿಯನ್ನು ಶೀಘ್ರವೇ ಪ್ರಕಟಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಕಳೆದ ಮೂರು ದಿನಗಳ ಹಿಂದಷ್ಟೇ ಐಸಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಇದೀಗ ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಈ ವಾರದ ಆರಂಭದಲ್ಲಿ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ತನ್ನ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ 12 ನೇ ತರಗತಿ ಪರೀಕ್ಷೆಯನ್ನು ಮುಂದೂಡಿದೆ. ಹಲವಾರು ರಾಜ್ಯ ಮಂಡಳಿಗಳು ಕೂಡಾ ಪರೀಕ್ಷೆಗಳನ್ನು ಮುಂದೂಡಿವೆ ಅಥವಾ ರದ್ದುಗೊಳಿಸಿವೆ.
12ನೇ ತರಗತಿ ಪರೀಕ್ಷೆಗಳನ್ನು ನಂತರದ ಹಂತದಲ್ಲಿ ನಡೆಸಲಾಗುವುದು, 10ನೇ ತರಗತಿಯ ವಿದ್ಯಾರ್ಥಿಗಳು ತದನಂತರ ಆಫ್‌ಲೈನ್ ಪರೀಕ್ಷೆಗಳಲ್ಲಿ ಹಾಜರಾಗಲು ಅಥವಾ ಮಂಡಳಿಯಿಂದ ಅಭಿವೃದ್ಧಿಪಡಿಸಿದ ನ್ಯಾಯಯುತ ಮತ್ತು ಪಕ್ಷಪಾತವಿಲ್ಲದ ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ಪಡೆಯುವ ಆಯ್ಕೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿತ್ತು. ಇದೀಗ 12ನೇ ತರಗತಿ ಪರೀಕ್ಷೆ ಮಾತ್ರ ನಡೆಯಲಿದೆ ಎಂದು ತಿಳಿಸಿದ್ದಾರೆ.