LATEST NEWS
ಮಸೀದಿಗಳಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ

ಉಡುಪಿ, ಎಪ್ರಿಲ್ 20: ಕೊರೊನಾ ಎರಡನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಮಾರ್ಗಸೂಚಿಗಳನ್ನು ಮಸೀದಿಗಳಲ್ಲಿ ಕಟ್ಟು ನಿಟ್ಟಾಗಿ ಪಾಲಿಸಬೇಕೆಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸಮುದಾಯಕ್ಕೆ ಮನವಿ ಮಾಡಿದೆ. ಈ ಮೂಲಕ ಸಮುದಾಯದ, ಸಮಾಜದ ಮತ್ತು ದೇಶದ ಆರೋಗ್ಯ ಕಾಪಾಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಜನರಲ್ಲಿ ಮನವಿ ಮಾಡಿದೆ.
ಮತ್ತೊಮ್ಮೆ ಕೋವಿಡ್-19 ನಮಗೆ ಎದುರಾಗಿದೆ. ಈ ಹಿಂದಿನಂತೇ ಸಾಕಷ್ಟು ಮುತುವರ್ಜಿಯಿಂದ ಮುಂಜಾಗೃತೆ ವಹಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪವಿತ್ರ ರಮದಾನ್ ತಿಂಗಳ ವೃತಾಚರಣೆಯ ಸಮಯವಾಗಿರುವ ಇಂದು ಮಸೀದಿಗಳಲ್ಲಿ ಈ ಹಿಂದಿನಂತೆ ಕಟ್ಟುನಿಟ್ಟಿನ ಕೋವಿಡ್ ನಿಯಮ ಗಳನ್ನು ಪಾಲಿಸುವ ಮೂಲಕ ಕೋವಿಡ್ ಎರಡನೆ ಅಲೆಯನ್ನು ತಡೆಯಬಹು ದಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಇಬ್ರಾಹೀಮ್ ಸಾಹೇಬ್ ಕೋಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆದುದರಿಂದ ಮಸೀದಿ ಜಮಾಅತ್ಗಳು ಮತ್ತು ಸ್ವಯಂ ಸೇವಕರು ಮಸೀದಿಗೆ ಬರುವ ಪ್ರಾರ್ಥನಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಮಾಡುವುದು ಹಾಗೂ ಮಾಸ್ಕ್ ಗಳ ಬಗ್ಗೆ ನಿಗಾವಹಿಸಬೇಕೆಂದ ಅವರು ಮುಸಲ್ಲಾ ಮತ್ತು ನಮಾಝ್ ನಿರ್ವಹಿಸುವವರ ನಡುವಿನ ಅಂತರ ಇತ್ಯಾದಿಗಳ ಬಗ್ಗೆ ನಿಗಾ ಇರಿಸಬೇಕು ಎಂದರು. ಇನ್ನು ವಯೋವೃದ್ಧರು ಮತ್ತು ಮಕ್ಕಳು ಮನೆಯಲ್ಲಿಯೇ ನಮಾಝನ್ನು ನಿರ್ವಹಿಸಬೇಕು. ಉಳಿದಂತೆ ಮುಸಲ್ಲಿಗಳು ಮಸೀದಿಯ ಮೇಲ್ವಿಚಾರಕರೊಂದಿಗೆ ಸಂಪೂರ್ಣವಾಗಿ ಸಹಕರಿಸುವ ಮೂಲಕ ಸರಳವಾದ ಆರೋಗ್ಯ ಪೂರ್ಣ ರಮದಾನ್ ವೃತಾಚರಣೆ ಕೈಗೊಳ್ಳಬೇಕು ಎಂದು ಅವರು ವಿನಂತಿ ಮಾಡಿದ್ದಾರೆ.