DAKSHINA KANNADA
ಕರೋನಾದಿಂದ ಮುಕ್ತಿಗಾಗಿ ಗೆಜ್ಜೆಗಿರಿಯಲ್ಲಿ ನಡೆಯಿತು ಶತೌಷಧಿಗಳ ಕಲಶಾಭಿಷೇಕ
ಕರೋನಾದಿಂದ ಮುಕ್ತಿಗಾಗಿ ಗೆಜ್ಜೆಗಿರಿಯಲ್ಲಿ ನಡೆಯಿತು ಶತೌಷಧಿಗಳ ಕಲಶಾಭಿಷೇಕ
ಪುತ್ತೂರು ಮಾ.16: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ತನ್ನ ಜೀವಿತಾವಧಿಯಲ್ಲಿ ಸಾವಿರಾರು ಜನರ ರೋಗ ರುಜಿನಗಳನ್ನ ತನ್ನ ಔಷಧಿಗಳ ಮೂಲಕ ಗುಣಮುಖಗೊಳಿಸಿದ ಈ ವೈದ್ಯೆಗೆ ಅಭಿಷೇಕ ನೆರವೇರಿಸುವ ಮೂಲಕ ಕೊರೊನಾ ಮಾರಿಯ ನಾಶಕ್ಕೆ ಹರಕೆ ಮಾಡಲಾಗಿದೆ.
ಸರಿ ಸುಮಾರು ಐನೂರು ವರ್ಷಗಳ ಹಿಂದೆ ತುಳುನಾಡಿನಲ್ಲಿ ನಾಟಿವೈದ್ಯೆ ಪರಂಪರೆಯಲ್ಲಿ ಜನಮಾನಸದಲ್ಲಿ ಹೆಸರಾಗಿರುವ ನಾಟಿ ವೈದ್ಯೆ ದೇಯಿ ಬೈದಿದೆಯಾಗಿದ್ದರು. ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿಯಾಗಿರುವ ಈಕೆ ತನ್ನ ಅಪೂರ್ವ ನಾಟಿ ವೈದ್ಯೆ ವೃತ್ತಿಯ ಮೂಲಕ ಆ ಕಾಲದಲ್ಲಿ ಖ್ಯಾತಿವೆತ್ತವಳಾಗಿದ್ದರು.
ಸಾವಿರಾರು ಜನರ ರೋಗ-ರುಜಿನಗಳನ್ನಲ್ಲದೆ, ಊರಿನ ರಾಜನ ರೋಗವನ್ನೂ ದೂರಮಾಡಿದ ಈಕೆಯನ್ನು ತುಳುನಾಡಿನ ಜನ ದೈವದ ರೂಪದಲ್ಲಿ ಇಂದು ಆರಾಧಿಸುತ್ತಿದ್ದಾರೆ.
ಈಗ ದೇಶವನ್ನು ಕಾಡುತ್ತಿರುವ ಕೊರೊನಾ ಮಾರಿಯನ್ನು ದೂರ ಮಾಡುವ ಶಕ್ತಿ ಈ ದೇಯಿ ಬೈದೆದಿಗಿದೆ ಎನ್ನುವ ಅಪಾರ ನಂಬಿಕೆಯಿಂದಾಗಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಗೆಜ್ಜೆಗಿರಿಯಲ್ಲಿರುವ ಈಕೆಯ ಮೂರ್ತಿಗೆ ನೂರು ಔಷಧೀಯ ಗಿಡಮೂಲಿಕೆಗಳನ್ನು ಸಂಗ್ರಹಿಸಿ ತಯಾರಿಸಲಾದ ದ್ರವ್ಯಗಳ ಕಲಶಾಭಿಷೇಕ ಮಾಡಲಾಯಿತು.
ಸಂಪ್ರದಾಯಿಕ ನಾಟಿ ವೈದ್ಯ ಪರಂಪರೆಗೆ ತನ್ನದೇ ಆದ ಮಹತ್ವವಿದ್ದು, ಪ್ರಸ್ತುತ ಸನ್ನಿವೇಶದಲ್ಲೂ ಇದು ಅತ್ಯಂತ ಪ್ರಭಾವಶಾಲಿ ಚಿಕಿತ್ಸೆಯಾಗಿಯೂ ಪ್ರಸಿದ್ಧಿಯಲ್ಲಿದೆ. ಇದೇ ಕಾರಣಕ್ಕಾಗಿಯೇ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಗಿಡ ಮೂಲಿಕೆಗಳನ್ನೇ ಇಲ್ಲಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತಿದೆ.
ನಾಟಿ ಔಷಧಿಯಲ್ಲಿ ಅತ್ಯಂತ ಪ್ರಮುಖ್ಯತೆಯನ್ನು ಪಡೆದಿರುವಂತಹ ಅಮೃತಬಳ್ಳಿಯನ್ನು ಇಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಮೂಲಕ ಎಲ್ಲಾ ಭಕ್ತರ ಆರೋಗ್ಯವನ್ನು ಇಲ್ಲಿನ ದೈವಗಳು ಕಾಪಾಡುತ್ತದೆ ಎನ್ನುವ ನಂಬಿಕೆಯೂ ಇಲ್ಲಿದೆ.
ಕೊರೊನಾ ರೋಗ ದೇಶದಲ್ಲೂ ಇದೀಗ ಹರಡುತ್ತಿರುವುದು ಎಲ್ಲರ ಆತಂಕಕ್ಕೂ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರಕಾರಗಳು ತಮ್ಮದೇ ಆದ ನೆಲೆಗಟ್ಟಿನಲ್ಲಿ ಮುಂಜಾಗೃತಾಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಸಂಪ್ರದಾಯವಾದಿಗಳಲ್ಲಿ ದೈವಗಳಲ್ಲಿ ಈ ಮಾರಿಯನ್ನು ತಡೆಗಟ್ಟುವ ಶಕ್ತಿಯಿದೆ ಎನ್ನುವ ಅಚಲ ನಂಬಿಕೆಯೂ ಇದೆ.
ಇದೇ ಕಾರಣಕ್ಕಾಗಿ ಸಂಕಷ್ಟದ ಈ ಸಮಯದಲ್ಲಿ ದೈವ-ದೇವರುಗಳಿಗೆ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿದೆ. ಇದೇ ರೀತಿ ಗೆಜ್ಜೆಗಿರಿಯ ದೇಯಿ ಬೈದೆದಿ ಕ್ಷೇತ್ರದಲ್ಲಿ ವಿಶೇಷ ಹೋಮ-ಹವನಗಳನ್ನೂ ನಡೆಸಲಾಗಿತ್ತು. ಕ್ಷೇತ್ರಕ್ಕೆ ಬಂದ ಎಲ್ಲಾ ಭಕ್ತಾಧಿಗಳಿಗೂ ದೈವದ ಮೂರ್ತಿಗೆ ಕಲಶಾಭಿಷೇಕ ಮಾಡಿದ ಔಷಧೀಯ ಗುಣಗಳ ದ್ರವ್ಯವನ್ನು ಸಿಂಪಡಿಸಲಾಯಿತು.
ಸ್ವ ರಕ್ಷಣೆಯ ಜೊತೆಗೆ ದೈವ-ದೇವರುಗಳ ಅಭಯವೂ ಇದ್ದಲ್ಲಿ ಕೊರೊನಾ ದಂತಹ ಮಹಾ ಮಾರಿ ಜನರನ್ನು ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ನಂಬಿಕೆ ಸಂಪ್ರದಾಯವಾದಿಗಳದ್ದಾಗಿದೆ. ಇದೇ ಕಾರಣಕ್ಕಾಗಿಯೇ ವಿಜ್ಞಾನದ ಜೊತೆಗೆ ದೈವಿಕ ಶಕ್ತಿಗೂ ಭಾರತದಲ್ಲಿ ಹೆಚ್ಚಿನ ಮಹತ್ವವೂ ಇದೆ.