Connect with us

LATEST NEWS

ಬಾಗಿಲು ಎಳೆದೇ ಬಿಡ್ತು ಅಟ್ಲಾಸ್ ಸೈಕಲ್ !!

ಬೀದಿಗೆ ಬಿದ್ದ ಸಾವಿರಾರು ಕಾರ್ಮಿಕರು

ನವದೆಹಲಿ, ಜೂನ್ 5 : ಅಟ್ಲಾಸ್ ಅಂದರೆ ಸೈಕಲಿಗೇ ಅನ್ವರ್ಥ ಎನ್ನುವ ಕಾಲ ಇತ್ತು. ಯಾಕಂದ್ರೆ, ಭಾರತದಲ್ಲಿ ಸೈಕಲಿನ ಹುಚ್ಚು ಹಚ್ಚಿದ್ದೇ ಅಟ್ಲಾಸ್ ಸೈಕಲ್ ಕಂಪೆನಿ. ಅಂಥ ಅಟ್ಲಾಸ್ ಸೈಕಲ್ ಕಂಪೆನಿ ಮೊನ್ನೆ ಜೂನ್ ಮೂರಕ್ಕೆ ಬಾಗಿಲು ಎಳೆದಿದೆ…
ಹೌದು.. ರಾಜಧಾನಿ ದೆಹಲಿಯ ಹೊರಭಾಗದ ಸಾಹಿಬಾಬಾದ್ ನಲ್ಲಿದ್ದ ಕಂಪೆನಿಯ ಅತಿದೊಡ್ಡ ಮತ್ತು ಕೊನೆಯ ಉತ್ಪಾದನಾ ಘಟಕವನ್ನು ಕಂಪೆನಿ ಮುಚ್ಚಿದೆ.

 ಲಾಕ್ ಡೌನ್ ಮತ್ತು ನಷ್ಟದ ಕಾರಣದಿಂದ ಕಂಪೆನಿಯನ್ನು ಈ ಸಮಯದಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ಅದರ ಸಿಇಓ ಎನ್.ಪಿ ಸಿಂಗ್ ರಾಣಾ ತಿಳಿಸಿದ್ದಾರೆ. ಇದೇ ವೇಳೆ, ಉತ್ಪಾದನೆ ನಿಲ್ಲಿಸುವುದು ತಾತ್ಕಾಲಿಕ ಅಷ್ಟೇ. ಕಂಪೆನಿಗೆ ಸೇರಿದ ಹೆಚ್ಚುವರಿ ಆಸ್ತಿಯನ್ನು ಮಾರಿ 50 ಕೋಟಿ ರೂಪಾಯಿ ಸರಿದೂಗಿಸಿಕೊಂಡು ಉತ್ಪಾದನೆ ಆರಂಭಿಸುತ್ತೇವೆ ಎಂದಿದ್ದಾರೆ.

ಇಷ್ಟಕ್ಕೂ ಕಂಪನಿ ಮುಚ್ಚಿದ ದಿನವೇ ಕಾಕತಾಳೀಯ. ಜೂನ್ 3 ನ್ನು ಜಗತ್ತಿನಲ್ಲಿ ವಿಶ್ವ ಸೈಕಲ್ ಡೇ ಎಂದು ಆಚರಿಸಲಾಗುತ್ತದೆ. ಇದೇ ದಿನವೇ ಜಗತ್ತಿನಲ್ಲಿ ಕೋಟ್ಯಂತರ ಜನರ ಮನಗೆದ್ದಿದ್ದ ಸೈಕಲ್ ಕಂಪನಿಯನ್ನೇ ಮುಚ್ಚಿರುವುದು.
1989ರಲ್ಲಿ ಸಾಹಿಬಾಬಾದ್ ನಲ್ಲಿ ಸ್ಥಾಪನೆಯಾಗಿದ್ದ ಅಟ್ಲಾಸ್ ಕಂಪನಿಯ ಸೈಕಲ್ ಫ್ಯಾಕ್ಟರಿ ದೇಶದಲ್ಲೇ ಅತಿದೊಡ್ಡ ಘಟಕವಾಗಿತ್ತು. ಅಟ್ಲಾಸ್ ಕಂಪನಿ ಇತ್ತೀಚಿನ ದಿನಗಳಲ್ಲಿ ಉಳಿಸಿಕೊಂಡಿದ್ದ ಕೊನೆಯ ಘಟಕವೂ ಇದೇ ಆಗಿತ್ತು. ಒಂದು ತಿಂಗಳಲ್ಲಿ ಎರಡು ಲಕ್ಷದಷ್ಟು ಸೈಕಲ್ ಉತ್ಪಾದಿಸುತ್ತಿದ್ದ ಭಾರತದ ಏಕೈಕ ಸೈಕಲ್ ಕಂಪೆನಿಯೂ ಇದೇ ಆಗಿತ್ತು.

ವಿಶೇಷ ಅಂದ್ರೆ, ಕಂಪೆನಿ ತನ್ನ ಉತ್ಪಾದನೆ ನಿಲ್ಲಿಸುವ ಬಗ್ಗೆ ಕೆಲಸಗಾರರಿಗೆ ಯಾವುದೇ ಮುನ್ಸೂಚನೆಯನ್ನೂ ಬಿಟ್ಟುಕೊಟ್ಟಿರಲಿಲ್ಲ. ಮೊನ್ನೆ ಲಾಕ್ ಡೌನ್ ಕಳೆದು ಕೆಲಸಕ್ಕೆಂದು ಫ್ಯಾಕ್ಟರಿಗೆ ಬಂದಾಗ ಗೇಟ್ ಹೊರಗೆ ಅಂಟಿಸಿದ್ದ ನೋಟೀಸ್ ನೋಡಿ ನೌಕರರಿಗೆ ಅಚ್ಚರಿಯಾಗಿತ್ತು. ” ಕಂಪನಿ ಹಲವು ವರ್ಷಗಳಿಂದ ನಷ್ಟದತ್ತ ಸಾಗಿದ್ದು ಕಷ್ಟದಲ್ಲಿಯೂ ನಡೆಸುತ್ತಾ ಬಂದಿದ್ದೇವೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕಂಪನಿ ನಡೆಸುವುದೇ ಕಷ್ಟವಾಗಿದೆ. ಕಚ್ಚಾ ವಸ್ತುಗಳನ್ನು ಖರೀದಿಸಲು ಹಣವಿಲ್ಲ. ಇಂಥ ಸ್ಥಿತಿಯಲ್ಲಿ ಕಂಪೆನಿ ನಡೆಸಲು ಸಾಧ್ಯವಿಲ್ಲ” ಎಂದು ನೋಟೀಸ್ ನಲ್ಲಿ ಬರೆದಿತ್ತು. ಹಾಗಿದ್ದರೂ, ಕೆಲಸಗಾರರು ರಜಾದಿನ ಹೊರತುಪಡಿಸಿ ಹಾಜರಿ ಹಾಕಿ ಹೋಗುವಂತೆ ಸೂಚನೆ ನೀಡಲಾಗಿತ್ತು.


2014ರ ಬಳಿಕ ನಷ್ಟದತ್ತ ಸಾಗಿದ ಅಟ್ಲಾಸ್ ಕಂಪೆನಿ, ಅದೇ ವರ್ಷದ ಡಿಸೆಂಬರ್ ತಿಂಗಳಲ್ಲಿ ಮಲಾನ್ ಪುರ್ ನಲ್ಲಿದ್ದ ಮೊದಲ ಘಟಕವನ್ನು ಮುಚ್ಚಿತ್ತು. ಆನಂತ್ರ 2018ರ ಫೆಬ್ರವರಿಯಲ್ಲಿ ಹರ್ಯಾಣದ ಸೋನೆಪತ್ ನಲ್ಲಿದ್ದ ಘಟಕವನ್ನೂ ಬಾಗಿಲು ಹಾಕಿತ್ತು. ಹಾಗೆ ನೋಡಿದರೆ, ಸೋನೆಪತ್ ಸೈಕಲ್ ಫ್ಯಾಕ್ಟರಿ ಕಂಪೆನಿಯ ಮೊಟ್ಟಮೊದಲ ಘಟಕ.

1951ರಲ್ಲಿ ಜಾನಕಿದಾಸ್ ಕಪೂರ್ ಸೋನೆಪತ್ ನಲ್ಲಿ ಸೈಕಲ್ ಉತ್ಪಾದನೆ ಆರಂಭಿಸಿದ್ದರು. ಸಣ್ಣಮಟ್ಟಿನ ಟಿನ್ ಶೆಡ್ ಹಾಕ್ಕೊಂಡು ಅಟ್ಲಾಸ್ ಸೈಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರಲ್ಲಿ ಆರಂಭಿಸಿದ್ದ ಫ್ಯಾಕ್ಟರಿ 12 ತಿಂಗಳಲ್ಲಿಯೇ 25 ಎಕರೆ ವ್ಯಾಪ್ತಿಗೆ ಬೆಳೆದಿತ್ತು. ಹೀಗೆ ಸಣ್ಣ ರೀತಿಯಲ್ಲಿ ಆರಂಭ ಕಂಡ ಅಟ್ಲಾಸ್ ಸೈಕಲ್ ಕಂಪನಿ, ಆನಂತ್ರ ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಜಗತ್ತಿನಲ್ಲೇ ಅತಿದೊಡ್ಡ ಸೈಕಲ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿ ಬೆಳೆದು ನಿಂತಿತ್ತು. ಒಂದು ಹಂತದಲ್ಲಿ ವರ್ಷಕ್ಕೆ 40 ಲಕ್ಷ ಸೈಕಲ್ ಉತ್ಪಾದಿಸಿ ಹೊರದೇಶಗಳಲ್ಲೂ ಭಾರೀ ಬೇಡಿಕೆ ಕುದುರಿಸಿಕೊಂಡಿತ್ತು.


“ಸದ್ಯಕ್ಕೆ ಸಾಹಿಬಾಬಾದ್ ಘಟಕವನ್ನು ಸ್ಥಗಿತಗೊಳಿಸಿದ್ದು ಮಾತ್ರ. ಕೊರೊನಾ ಲಾಕ್ಡೌನ್ ನಮ್ಮನ್ನು ಮತ್ತೊಂದು ಸಂಕಷ್ಟಕ್ಕೆ ದೂಡಿದೆ. ಆದರೆ, ನಾವು ಮತ್ತೆ ಮೇಲೆ ಬರುತ್ತೇವೆ. 70 ವರ್ಷ ಪುರಾತನ ನಮ್ಮ ಬ್ರಾಂಡಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ ” ಎಂದು ವಿಶ್ವಾಸದಿಂದ ಹೇಳುತ್ತಾರೆ ಸಿಇಓ ರಾಣಾ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *