LATEST NEWS
45 ಕ್ಕೂ ಹೆಚ್ಚು ಸೋಂಕು ಪತ್ತೆ- ಠಾಣೆ ಸೇರಿದಂತೆ ಉಳ್ಳಾಲ ಭಾಗದಲ್ಲಿ 14 ಕಡೆ ಸೀಲ್ ಡೌನ್ !!
ಮಂಗಳೂರು, ಜುಲೈ 1 : ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಳ್ಳಾಲ ಭಾಗದಲ್ಲಿ ಕೊನೆಗೂ ಸೀಲ್ ಡೌನ್ ಮಾಡಲಾಗುತ್ತಿದೆ. ಉಳ್ಳಾಲ ಠಾಣೆ ಸೇರಿದಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಪ್ರಮುಖ ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಮಂಗಳೂರು ನಗರ ಹೊರವಲಯದ ಉಳ್ಳಾಲ ಭಾಗದಲ್ಲಿ ಸುಮಾರು 45ಕ್ಕೂ ಹೆಚ್ಚು ಕೊರೊನಾ ಪೊಸಿಟಿವ್ ಆಗಿದೆ ಎನ್ನಲಾಗುತ್ತಿದೆ. ಇದೇ ವೇಳೆ ಉಳ್ಳಾಲ ಪೊಲೀಸ್ ಠಾಣೆ ಒಂದರಲ್ಲೇ 12 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮಧ್ಯೆ, ಬಂದ್ ಮಾಡಿದ್ದ ಉಳ್ಳಾಲ ಠಾಣೆಯನ್ನು ಉಪವಿಭಾಗದ ಎಸಿಪಿಯವರು ಬುಧವಾರದಿಂದ ತೆರೆಯುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರು ಆತಂಕ ತೋಡಿಕೊಂಡಿದ್ದ ಬಗ್ಗೆ “ಮ್ಯಾಂಗಲೂರ್ ಮಿರರ್” ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಠಾಣೆಯನ್ನು ಸಂಪೂರ್ಣ ಸೀಲ್ ಡೌನ್ ಮಾಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಠಾಣಾ ಕರ್ತವ್ಯಕ್ಕೆ ತಾತ್ಕಾಲಿಕವಾಗಿ ಪರ್ಯಾಯ ಕಚೇರಿ ನೋಡಿಕೊಳ್ಳಲು ಠಾಣಾಧಿಕಾರಿಗೆ ಸೂಚನೆ ನೀಡಿದ್ದಾರೆ.
ಉಳ್ಳಾಲ ಪ್ರದೇಶದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಸ್ಥಳೀಯ ಶಾಸಕ ಯು.ಟಿ ಖಾದರ್ ಕೂಡ ಲಾಕ್ ಡೌನ್ ಹೇರುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದರು. ಅಲ್ಲದೆ, ನಗರಸಭೆ ವ್ಯಾಪ್ತಿಯಲ್ಲಿ ರ್ಯಾಂಡಮ್ ಚೆಕ್ಕಿಂಗ್ ಏರ್ಪಡಿಸಲು ಸೂಚನೆ ನೀಡಿದ್ದರು.
ಉಳ್ಳಾಲ ವ್ಯಾಪ್ತಿಯಲ್ಲಿ ನಾಲ್ಕು ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರಸಭೆ ವ್ಯಾಪ್ತಿಯ ಆಝಾದ್ ನಗರ, ಕಲ್ಲಾಪು, ಇನ್ ಲ್ಯಾಂಡ್ ಇಂಪಾಲ ಕಟ್ಟಡ, ಪೊಲೀಸ್ ಠಾಣೆ, ಬಂಗೇರ ಲೇನ್, ಕೋಟೆಪುರ ಸೇರಿದಂತೆ 14 ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ನಗರಸಭೆ ಆವರಣದಲ್ಲಿ ಸಾಮೂಹಿಕ ಚೆಕ್ಕಿಂಗ್ ಆಗುತ್ತಿದೆ. ಇದರಿಂದಾಗಿ ಉಳ್ಳಾಲ ಭಾಗದಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ವುವ ಸಾಧ್ಯತೆಯಿದೆ. ಅಲ್ಲದೆ, ಉಳ್ಳಾಲದ ಜನತೆ ಕೊರೊನಾ ಆತಂಕದಲ್ಲೇ ದಿನ ದೂಡುವಂತಾಗಿದೆ.