BANTWAL
ಬಂಟ್ವಾಳ – ಮತ್ತೆ ನೈತಿಕ ಪೊಲೀಸ್ ಗಿರಿ – ಈ ಬಾರಿ ಟಾರ್ಗೆಟ್ ಆಗಿದ್ದು ಪೊಲೀಸ್ ಸಿಬ್ಬಂದಿ….!!
ಬಂಟ್ವಾಳ ಜುಲೈ 28: ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಸುದ್ದಿಯಾಗಿದ್ದು, ಆದರೆ ಈ ಬಾರಿ ಇದಕ್ಕೆ ಸಿಕ್ಕಿದ್ದು ಸ್ವತಃ ಪೊಲೀಸ್ ಸಿಬ್ಬಂದಿಯೇ. ಎನ್ಐಎ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಯ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತುಂಬೆ ನಿವಾಸಿಗಳಾದ ಮನೀಷ್ ಪೂಜಾರಿ ಮತ್ತು ಮಂಜುನಾಥ ಆಚಾರ್ಯಎಂದು ಗುರುತಿಸಲಾಗಿದೆ. ಈ ಹಿಂದೆ ಬಂಟ್ವಾಳದ ಡಿವೈಎಸ್ಪಿ ಕಚೇರಿಯಲ್ಲಿದ್ದು ಈಗ ಎನ್ಐಎ ವಿಭಾಗದಲ್ಲಿರುವ ಪೊಲೀಸ್ ಸಿಬಂದಿಯೊಬ್ಬರು ಬಿ.ಸಿ.ರೋಡ್ ನಲ್ಲಿರುವ ಪೊಲೀಸ್ ವಸತಿಗೃಹದಲ್ಲಿ ತಂಗಿದ್ದಾರೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಎನ್.ಐ.ಎ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಅವರು ತನ್ನ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿ.ಸಿ.ರೋಡಿನ ಹೋಟೆಲ್ ಒಂದಕ್ಕೆ ಊಟಕ್ಕೆ ಗುರುವಾರ ರಾತ್ರಿ ಹೋಗಿದ್ದರು. ಬಳಿಕ ಅಲ್ಲಿಂದ ನಡೆದುಕೊಂಡು ಮನೆಗೆ ಬರುವ ವೇಳೆ ವೈನ್ ಶಾಪ್ ಮುಂಭಾಗದಲ್ಲಿದ್ದ ಇಬ್ಬರು ಯುವಕರು ಇವರನ್ನು ಗಮನಿಸಿ, ಹಿಂಬಾಲಿಸಿಕೊಂಡು ಬಂದಿದ್ದಾರೆ. ಪೊಲೀಸ್ ಸಿಬ್ಬಂದಿ ಕುಟುಂಬವನ್ನು ಮನೆಗೆ ಮುಟ್ಟಿಸಿ, ಬಳಿಕ ಮತ್ತೆ ಕೇಸ್ ಒಂದರ ವಿಚಾರಕ್ಕೆ ಮನೆಯಿಂದ ಹೊರಕ್ಕೆ ಹೊರಡುತ್ತಿದ್ದಂತೆ, ಮನೆಯ ಅಂಗಳದಲ್ಲಿ ನಿಂತಿದ್ದ ಇಬ್ಬರು ಯುವಕರು ಮಾತಿಗಿಳಿದಿದ್ದಾರೆ. ಅವಾಚ್ಯವಾಗಿ ನಿಂದಿಸಿ, “ಹುಡುಗಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ” ಎಂದು ಬೆದರಿಕೆ ಹಾಕಿದ್ದಾರೆ. ಪೋಲೀಸ್ ಎಂದು ಗೋಗೆರದರೂ ಲೆಕ್ಕಿಸಿದೆ ಹಲ್ಲೆಗೂ ಮುಂದಾಗಿದ್ದಾರೆ ಎಂದು ದೂರಲಾಗಿದೆ.
ಗಲಾಟೆ ನಡೆಯುವ ವೇಳೆ ಪೊಲೀಸ್ ಸಿಬ್ಬಂದಿ ಪತ್ನಿ ಹೊರಬಂದಿದ್ದು, ಆರೋಪಿಗಳು ಅವರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಇಬ್ಬರನ್ನೂ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದ್ದು, ತನಿಖೆ ಸಾಗಿದೆ. ಪೋಲೀಸ್ ಕುಟುಂಬದ ಮಾನಭಂಗಕ್ಕೆ ಯತ್ನಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ ಬಗ್ಗೆ ದೂರು ದಾಖಲಾಗಿದೆ.