DAKSHINA KANNADA
10 ರೂಪಾಯಿ ಬೆಲೆಯ ನಾಣ್ಯಗಳನ್ನು ಸ್ವೀಕರಿಸಲು ಗ್ರಾಹಕರು ಮತ್ತು ವರ್ತಕರು ಹಿಂದೇಟು: ವರ್ತಕ ಸಂಘದಿಂದ ಜಾಗೃತಿ
ಪುತ್ತೂರು, ಆಗಸ್ಟ್ 26 : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಚಲಾವಣೆಯಾದ 10 ರೂಪಾಯಿ ಬೆಲೆಯ ನಾಣ್ಯಗಳನ್ನು ಸ್ವೀಕರಿಸಲು ಗ್ರಾಹಕರು ಮತ್ತು ವರ್ತಕರು ಹಿಂದೇಟು ಹಾಕುತ್ತಿದ್ದು, ಪುತ್ತೂರು ವರ್ತಕ ಸಂಘದಿಂದ ಈ ಕುರಿತು ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಜೋ ಡಿಸೋಜಾ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚಿನ ಕೆಲ ವರ್ಷಗಳಿಂದಲೂ ಸರಕಾರ ಬಿಡುಗಡೆಗೊಳಿಸಿದ 10 ರೂಪಾಯಿ ಮುಖಬೆಲೆಯ ನಾಣ್ಯವನ್ನು ಪಡೆಯಲು ಗ್ರಾಹಕರು ಮತ್ತು ವರ್ತಕರು ಹಿಂದೇಟು ಹಾಕುತ್ತಿದ್ದಾರೆ.
ಈ ನಾಣ್ಯ ಚಲಾವಣೆಯಲ್ಲಿ ಇಲ್ಲ ಎನ್ನುವ ವಿಚಾರ ಜನರಲ್ಲಿದ್ದು, ಇದು ತಪ್ಪು ಕಲ್ಪನೆ ಎಂದರು. ನಾಣ್ಯವನ್ನು ಸ್ವೀಕರಿಸದ ಕಾರಣ ಭಾರೀ ಪ್ರಮಾಣದ ನಾಣ್ಯಗಳು ಬ್ಯಾಂಕ್ ಗಳಲ್ಲೇ ಶೇಖರಣೆಗೊಂಡಿದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳ ಜೊತೆ ಸೇರಿಕೊಂಡು ನಾಣ್ಯದ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲಾಗುವುದು ಎಂದು ಅವರು ತಿಳಿಸಿದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಿಡುಗಡೆಗೊಳಿಸಿರುವ ನಾಣ್ಯವನ್ನು ಸ್ವೀಕರಿಸುವುದಿಲ್ಲ ಎನ್ನುವ ಅಧಿಕಾರ ಯಾರಿಗೂ ಇಲ್ಲ. ಈ ರೀತಿ ವರ್ತಿಸಿದವರ ವಿರುದ್ಧ ಕಾನೂನು ಕ್ರಮಗಳನ್ನೂ ಕೈಗೊಳ್ಳುವ ಅವಕಾಶವೂ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.