Connect with us

    DAKSHINA KANNADA

    ಆಮೆಗತಿಯಲ್ಲಿ ಸಾಗುತ್ತಿದೆ  ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ,  ಬೀದಿಗೀಳಿದು ಪ್ರತಿಭಟಿಸಿದ ಮಂಗಳೂರು ಜನ..!

    ಮಂಗಳೂರು : ಆಮೆಗತಿಯಲ್ಲಿ ಸಾಗುತ್ತಿರುವ ಮಂಗಳೂರು ನಗರದ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯವನ್ನು ಖಂಡಿಸಿ  ಜನ ಬೀದಿಗಳಿದು ಪ್ರತಿಭಟನೆ ನಡೆಸಿದ್ದಾರೆ.

    ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಒತ್ತಾಯಿಸಿ, ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಪರ್ಯಾಯ ಒಳರಸ್ತೆಯನ್ನು ಕೂಡಲೇ ಸರಿಪಡಿಸಲು ಆಗ್ರಹಿಸಿ ಹಾಗೂ ಪಾಂಡೇಶ್ವರದಲ್ಲೂ ರೈಲ್ವೇ ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ಹೋರಾಟ ಸಮಿತಿಯ ನೇತ್ರತ್ವದಲ್ಲಿ ಮಂಗಳವಾರ ಜೆಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್ ಬಳಿಯಲ್ಲಿ ಸಾಮೂಹಿಕ ಧರಣಿ ಸತ್ಯಾಗ್ರಹವನ್ನು ನಡೆಸಲಾಯಿತು.

    ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ದಿಲ್ ರಾಜ್ ಆಳ್ವರವರು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವುದಾಗಿ ವಾಗ್ದಾನವಿತ್ತ ರೈಲ್ವೇ ಇಲಾಖೆ ಮತ್ತು ಮಂಗಳೂರು ಮಹಾನಗರ ಪಾಲಿಕೆಯು, ಮೂರು ವರ್ಷ ಕಳೆದರೂ ಕೂಡ ಚಕಾರ ಶಬ್ದವೆತ್ತದೆ ಜನಸಾಮಾನ್ಯರಿಗೆ ಮಹಾಮೋಸವೆಸಗಿದೆ. ಸಾಮಾನ್ಯ ಮೇಸ್ತ್ರಿಗೆ ಇರುವಷ್ಟು ಜ್ಞಾನ ಅಂತರರಾಷ್ಟ್ರೀಯ ಖ್ಯಾತಿ ಹೊಂದಿರುವ ಮಂಗಳೂರಿನ ಅಧಿಕಾರಿಗಳಿಗೆ ಇಲ್ಲವಾಗಿದೆ‌. ರೈಲ್ವೇ ಇಲಾಖೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಸಾಮಾನ್ಯ ಜನತೆಯ ಸಂಕಷ್ಟವನ್ನು ಕೇಳುವವರೇ ಇಲ್ಲವಾಗಿದೆ.ಈ ಮೂಲಕ ರೈಲ್ವೇ ಇಲಾಖೆಯ ಸರ್ವಾಧಿಕಾರಿ ವರ್ತನೆಯನ್ನು ಜನತೆ ಒಕ್ಕೊರಲಿನಿಂದ ಖಂಡಿಸಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ರವರು, ಕಳೆದ ಹಲವು ವರ್ಷಗಳಿಂದ ಸ್ಥಳೀಯ ಜನತೆ ಹಲವಾರು ಹೋರಾಟಗಳನ್ನು ನಡೆಸಿದ್ದರೂ ಅದ್ಯಾವುದನ್ನು ಕ್ರಾರೇ ಮಾಡದೆ ಜನದ್ರೋಹಿಯಾಗಿ ವರ್ತಿಸಿದ ಜನಪ್ರತಿನಿಧಿಗಳನ್ನು ಜನತೆ ಜವಾಬ್ದಾರಿಯುತ ನೆಲೆಯಲ್ಲಿ ಪ್ರಶ್ನಿಸಬೇಕಾಗಿದೆ.ಕೂಡಲೇ ಮನಪಾ ಹಾಗೂ ರೈಲ್ವೇ ಇಲಾಖೆ ಸ್ಪಂದಿಸದಿದ್ದಲ್ಲಿ ರೈಲು ರೋಕೋ,ಶಾಸಕರಿಗೆ ಘೆರಾವು,ಮನಪಾ ಕಚೇರಿಗೆ ಮುತ್ತಿಗೆಯಂತಹ ತೀವ್ರ ರೀತಿಯ ಹೋರಾಟವನ್ನು ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದರು

    ಪ್ರತಿಭಟನೆಯನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನಾಯಕರಾದ ಕೆ.ಯಾದವ ಶೆಟ್ಟಿ, ಕಾರ್ಪೊರೇಟರ್ ಅಬ್ದುಲ್ ಲತೀಫ್,ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಕಾರ್ಮಿಕ ಮುಖಂಡರಾದ ಜೆ.ಬಾಲಕ್ರಷ್ಣ ಶೆಟ್ಟಿ,ಯೋಗೀಶ್ ಜಪ್ಪಿನಮೊಗರು,ಸೀತಾರಾಮ ಬೇರಿಂಜ, ಸುಕುಮಾರ್ ತೊಕ್ಕೋಟು, ಪ್ರಗತಿಪರ ಚಿಂತಕರಾದ ಪ್ರೋ.ಶಿವರಾಮ ಶೆಟ್ಟಿ, ಹೋರಾಟ ಸಮಿತಿಯ ಅಧ್ಯಕ್ಷರಾದ ಜೆ ಇಬ್ರಾಹಿಂ ಜೆಪ್ಪು,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್ ರವರು ಮಾತನಾಡಿ,ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜೆಪ್ಪು ಮಹಾಕಾಳಿಪಡ್ಪು ಅಂಡರ್ ಪಾಸ್ ನಿರ್ಮಾಣ ಕಾರ್ಯದಿಂದ ತೀವ್ರ ಸಂಕಷ್ಟಕ್ಕೊಳಗಾದ ಜನತೆಯ ನೋವುಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಈ ಹಿಂದಿನ ಸಂಸದರಾಗಿದ್ದ ನಳೀನ್ ಕುಮಾರ್ ಕಟೀಲ್,ಹಾಲಿ ಶಾಸಕ ವೇದವ್ಯಾಸ ಕಾಮತ್,ಮಂಗಳೂರು ಮಹಾನಗರ ಪಾಲಿಕೆಯ ಬೇಜವಾಬ್ದಾರಿತನವನ್ನು ತೀವ್ರವಾಗಿ ಖಂಡಿಸಿ ಅಂಡರ್ ಪಾಸ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ನಡೆಸದಿದ್ದರೆ ಹಾಗೂ ಪಾಂಡೇಶ್ವರದಲ್ಲೂ ರೈಲ್ವೇ ಮೇಲ್ಸೇತುವೆ ನಿರ್ಮಾಣ ಕಾರ್ಯ ಮಾಡದಿದ್ದರೆ ಶಾಸಕರ ಕಚೇರಿ ಹಾಗೂ ರೈಲ್ವೇ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

    ಧರಣಿ ಸತ್ಯಾಗ್ರಹದಲ್ಲಿ ಸ್ಥಳೀಯ ಮಸೀದಿಯ ಮುಖಂಡರಾದ ಶರೀಫ್, ಮುಜಾಂಬಿಲ್, ಅಬ್ದುಲ್ ವಹಾಬ್,ಹೋರಾಟ ಸಮಿತಿಯ ನಾಯಕರಾದ ನಾಗೇಶ್ ಕೋಟ್ಯಾನ್,ಅಸುಂತ ಡಿಸೋಜ, ಭಾರತಿ ಬೋಳಾರ, ಅಶೋಕನ್ ಬೋಳಾರ, ಬಾಬು ಪೂಜಾರಿ,ಕಾರ್ಮಿಕ ಮುಖಂಡರಾದ ಪದ್ಮಾವತಿ ಶೆಟ್ಟಿ,ಜಯಲಕ್ಶ್ಮಿ ಜಪ್ಪಿನಮೊಗರು,ಕರುಣಾಕರ್ ಮಾರಿಪಳ್ಳ,ವಿ ಕುಕ್ಯಾನ್, ದಿನೇಶ್ ಶೆಟ್ಟಿ, ಉದಯಚಂದ್ರ ರೈ, ಮಹಿಳಾ ಮುಖಂಡರಾದ ಪ್ರಮೀಳಾ ದೇವಾಡಿಗ, ಯೋಗಿತಾ ಉಳ್ಳಾಲ, ಪ್ರಮೋದಿನಿ ಕಲ್ಲಾಪು, ತುಳುನಾಡ ರಕ್ಷಣಾ ವೇದಿಕೆಯ ಜ್ಯೋತಿಕಾ ಜೈನ್,ಪ್ರಶಾಂತ್ ಕಡಬ,ಸುಕೇಶ್ ಉಚ್ಚಿಲ್,ರಿಕ್ಷಾ ಹಾಗೂ ಇತರ ವಾಹನ ಚಾಲಕರ ಸಂಘಟನೆಯ ಮುಖಂಡರಾದ ಮೋಹನ್ ಅತ್ತಾವರ, ಮಹಮ್ಮದ್ ಅನ್ಸಾರ್,ಅಬ್ದುಲ್ ಖಾದರ್,ಯುವಜನ ನಾಯಕರಾದ ದೀಪಕ್ ಬಜಾಲ್,ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್,ಜಗತ್ಪಾಲ್ ಕೋಡಿಕಲ್, ಮಾಜಿ ವಿದ್ಯಾರ್ಥಿ ನಾಯಕರಾದ ಯಶು ಕುಮಾರ್,ಮಾಧುರಿ ಬೋಳಾರ,ಮನೀಷ್ ಬೋಳಾರ, ರೈತ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಆದಿವಾಸಿ ಸಂಘಟನೆಯ ಪ್ರಮುಖರಾದ ಕರಿಯ,ಶೇಖರ್ ವಾಮಂಜೂರು,ರಶ್ಮಿ, ದಿನೇಶ್, ಮಾಜಿ ಉಪಮೇಯರ್ ಕವಿತಾವಾಸು,ದಲಿತ ನಾಯಕರಾದ ತಿಮ್ನಯ್ಯ ಕೊಂಚಾಡಿ, ಪೆನ್ಶನ್ ದಾರರ ಸಂಘಟನೆಯ ನಾಯಕರಾದ ರಿಚರ್ಡ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು

    Share Information
    Advertisement
    Click to comment

    You must be logged in to post a comment Login

    Leave a Reply