DAKSHINA KANNADA
ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತೊಮ್ಮೆ ಸಂವಿಧಾನ ಬದಲಾಗಬೇಕು: ಸುಬ್ರಹ್ಮಣ್ಯ ನಟ್ಟೋಜ ಹೇಳಿಕೆ
ಪುತ್ತೂರು, ಜುಲೈ 13: ಸಾವಿರಾರು ವರ್ಷಗಳಿಂದ ಗುರುಪೂಜೆ ಸಂಸ್ಕೃತಿ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಗುರುವಿಲ್ಲದ ವಿದ್ಯೆ ಇಲ್ಲ, ಹಾಗೆಯೇ ವಿದ್ಯೆಗೆ ಗುರು ಬೇಕು. ಇದು ಅತ್ಯಂತ ಪವಿತ್ರ ಕಾರ್ಯ. ಹಿಂದೂ ರಾಷ್ಟ್ರ ಋಷಿ ಮುನಿಗಳ, ಹಿರಿಯರ ಕನಸು ಎಂದು ಅಂಬಿಕಾ ಸಮೂಹ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಸುಬ್ರಮಣ್ಯ ನಟ್ಟೋಜ ಹೇಳಿದರು.
ಸನಾತನ ಸಂಸ್ಥೆಯ ವತಿಯಿಂದ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಆಯೋಜಿಸಲಾದ ಗುರು ಪೂರ್ಣಿಮಾ ಮಹೋತ್ಸವದಲ್ಲಿ ಅವರು ಉಪನ್ಯಾಸ ನೀಡಿದರು. ಇಂದು ಸರಕಾರಿ ಶಾಲೆಗಳಲ್ಲಿ ಗುರುಪೂಜೆ ನಡೆಯುತ್ತಿಲ್ಲ. ಗುರುವಿಗೆ ಶರಣಾದರೆ ಮಾತ್ರ ಅರಿವು ಸಾಧ್ಯ. ಸೆಕ್ಯುಲರ್ ಎಂಬ ಪದ ಇಂದು ಅಪರ್ಥವಾಗಿದೆ. ದೇಶ ಧರ್ಮದ ಆಧಾರದಲ್ಲೇ ವಿಭಜನೆ ಆಗಿದೆ. ಮುಸ್ಲಿಮರಿಗಾಗಿ ಪಾಕಿಸ್ತಾನ ದೇಶ ರಚನೆಯಾದಾಗ ನಾಯಕರು ಅವರನ್ನು ಅಲ್ಲಿಗೆ ಹೋಗಿ ಎನ್ನಬೇಕಿತ್ತು. ಸ್ವಾತಂತ್ರ್ಯ ಅನಂತರದಲ್ಲಿ ಹಿಂದೂ ರಾಷ್ಟ್ರ ಎನ್ನುವ ಪರಿಕಲ್ಪನೆ ಕುಂಠಿತಗೊಂಡಿದೆ ಎಂದು ಅವರು ಹೇಳಿದರು.
ಸಂವಿಧಾನ ತಿದ್ದುಪಡಿ ಆಗಲಿ
ಈ ಹಿಂದೆ ಸಂಸದ ಅನಂತ ಕುಮಾರ್ ಹೆಗಡೆ ಅವರು ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನ ಬದಲಾವಣೆಯ ಪ್ರಸ್ತಾಪ ಮಾಡಿದ್ದರು. ಸಂವಿಧಾನ 105 ಬಾರಿ ತಿದ್ದುಪಡಿಯಾದಾಗ ಯಾರೂ ಮಾತನಾಡಿಲ್ಲ. ಈಗ 106 ಬಾರಿ ಹಿಂದೂ ರಾಷ್ಟ್ರಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಆವಶ್ಯಕತೆ ಇದೆ ಎಂದು ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಬಳಿಕ ‘ಧರ್ಮನಿಷ್ಠ ಸಮಾಜದ ನಿರ್ಮಾಣ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ’ ವಿಷಯಗಳ ಕುರಿತು ಹಿಂದೂ ಜನಜಾಗೃತಿ ಸಮಿತಿಯ ಸಂಯೋಜಕ ವಿವೇಕ್ ಪೈ ವಿಶೇಷ ಉಪನ್ಯಾಸ ನೀಡಿದರು.
ಗುರುಪೂಜೆ, ಪ್ರದರ್ಶನ
ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ. ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ (ಗುರುಪೂಜೆ) ನಡೆಯಿತು. ‘ಸ್ವಸಂರಕ್ಷಣ ಪ್ರಾತ್ಯಕ್ಷಿಕೆ’ಯು ವಿಶೇಷ ಆಕರ್ಷಣೆಯಾಗಿತ್ತು. ಗುರು ಆಠವಳೆಯವರ ಸಂದೇಶ, ವೀಡಿಯೋ ಪ್ರದರ್ಶನ ಮಾಡಲಾಯಿತು. ಧರ್ಮ, ಅಧ್ಯಾತ್ಮ, ಸಾಧನೆ, ಬಾಲಸಂಸ್ಕಾರ, ಆಚಾರಧರ್ಮ, ಆಯುರ್ವೇದ, ಪ್ರಥಮ ಚಿಕಿತ್ಸೆ, ಸ್ವರಕ್ಷಣೆ, ಹಿಂದೂ ರಾಷ್ಟ್ರ ಮುಂತಾದ ವಿವಿಧ ವಿಷಯಗಳ ಗ್ರಂಥಪ್ರದರ್ಶನ ಹಾಗೂ ರಾಷ್ಟ್ರ-ಧರ್ಮಕ್ಕೆ ಸಂಬಂಧಿಸಿದ ಫಲಕಗಳನ್ನು ಪ್ರದರ್ಶಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಬಾಲಕೃಷ್ಣ, ಶ್ರೀಮತಿ ನವೀನ, ಹರಿಪ್ರಸಾದ್ ನೆಲ್ಲಿಕಟ್ಟೆ ಮತ್ತಿತ್ತರರು ಉಪಸ್ಥಿತರಿದ್ದರು.