LATEST NEWS
ನನ್ನ ಸಾವಿಗೆ ಆ ಮೂವರು ಕಾರಣ – ಪೋಲಿಸ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣದ ಡೆತ್ ನೋಟ್ ಪತ್ತೆ
ಉಡುಪಿ ಮೇ 01: ಆದಿ ಉಡುಪಿಯಲ್ಲಿ ನಡೆದ ಪೊಲೀಸ್ ಸಿಬ್ಬಂದಿಯೊಬ್ಬರ ಆತ್ಮಹತ್ಯೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಮೃತರು ಬರೆದಿದ್ದ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಮೂವರು ಪೊಲೀಸರು ಕಾರಣ ಎಂದು ಬರೆಯಲಾಗಿದೆ.
ಆದಿ ಉಡುಪಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಉತ್ತರಪತ್ರಿಕೆಯ ಮೌಲ್ಯಮಾಪನ ಕೇಂದ್ರದ ಗಾರ್ಡ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಎಹೆಚ್. ಸಿ 104 ನೇ ರಾಜೇಶ್ ಕುಂದರ್ ರವರ ಎಪ್ರಿಲ್ 28 ರಂದು ತನ್ನ ಸರ್ವಿಸ್ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಒಂದು ತಿಂಗಳ ಹಿಂದೆ ಗಂಗೊಳ್ಳಿ ಪೋಲಿಸ್ ಠಾಣೆಯಲ್ಲಿ ಪೋಲಿಸರ ನಡುವೆ ನಡೆದ ಗಲಾಟೆ ವಿಚಾರವಾಗಿ ಒಂದು ತಿಂಗಳು ಕಾಲ ಮೃತ ರಾಜೇಶ್ ಅವರು ಅಮಾನತ್ತಿನಲ್ಲಿದ್ದರು. ನಂತರ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಅಮಾನತಿನಿಂದ ಮಾನಸಿಕವಾಗಿ ಕುಗ್ಗಿದ್ದರು ಎಂದು ಹೇಳಲಾಗಿತ್ತು. ಆದರೆ ಈಗ ಡೆತ್ ನೋಟ್ ನಿಂದ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ. ಲಭ್ಯವಾಗಿರುವ ಡೆತ್ ನೋಟ್ ನಲ್ಲಿ ಡಿಎಆರ್ ಎಸಿಪಿ ಉಮೇಶ್, ಅಸ್ಪಕ್ ಹಾಗೂ ಗಂಗೊಳ್ಳಿ ಠಾಣಾ ಪಿಎಸ್‌ಐ ನಂಜ ನಾಯ್ಕ ಹಾಗೂ ಇನ್ನೋರ್ವ ವ್ಯಕ್ತಿ ತನ್ನ ಸಾವಿಗೆ ಕಾರಣ ಎಂದು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಮೇಲೆ ಈ ಮೂವರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೂರು ಆರೋಪಿಗಳ ಸಹಿತ ನಾಲ್ಕನೇ ಆರೋಪಿ ಇರುವುದಾಗಿ ಡೆತ್ ನೋಟ್ ನಲ್ಲಿ ಬರೆದಿದ್ದು, ಆತ್ಮಹತ್ಯೆಗೆ ಪ್ರಚೋದನೆ ಮಾಡಿದ ಆ ವ್ಯಕ್ತಿ ಯಾರು ಎಂಬ ಪ್ರಶ್ನೆ ಮೂಡಿದೆ.