LATEST NEWS
ಕಾಂಗ್ರೆಸ್ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಸಮುದಾಯಗಳ ನಡುವೆ ಒಡಕು ಮೂಡಿಸಿ ದ್ವೇಷದ ರಾಜಕಾರಣದ ಮೂಲಕ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ.
ಅಲ್ಲಲ್ಲಿ ಬಿಜೆಪಿ ಕಾರ್ಯಕರ್ತರ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಗಳು ನಡೆದು ಕೋಮು ಭಾವನೆ ಕೆರಳಿಸುವ ಕೃತ್ಯ ನಡೆಯುತ್ತಿದೆ. ಕೆಲವೆಡೆ ಪಾಕಿಸ್ಥಾನದ ಧ್ವಜ ಹಾರಿಸುವ ಮೂಲಕ ದೇಶ ದ್ರೋಹದ ಕೆಲಸವೂ ನಡೆದಿದೆ. ಈ ಎಲ್ಲ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಘೋಷಿಸಿದ `ಗ್ರಾರೆಂಟಿ’ ಈಗಲೇ ದೊಡ್ಡ ಮಟ್ಟಿನ ಗೊಂದಲಕ್ಕೆ ಎಡೆ ಮಾಡಿದೆ. ಸರಕಾರ ಬಂದ 24 ಗಂಟೆಯಲ್ಲೇ ಗ್ಯಾರಂಟಿ ಜಾರಿ ಎಂದು ಘೋಷಿಸಿದ್ದ ಕಾಂಗ್ರೆಸ್ ಈಗ ಪೊಳ್ಳು ಭರವಸೆಗಳನ್ನು ಈಡೇರಿಸಲು ಪರದಾಡುತ್ತಿದೆ. ಸರಕಾರ ಬಂದು ದಿನ ಹತ್ತಾದರೂ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೆ ಅನಗತ್ಯ ವಿಳಂಬ ಮಾಡಿ ಗ್ಯಾರಂಟಿಗಳಿಗೆ ನಿಯಮ ತರಲು ಹೊರಟಿದೆ. ಬಸ್ ಗಳಲ್ಲಿ ಜನ ಟಿಕೆಟ್ ಇಲ್ಲದೆ ಪ್ರಯಾಣಿಸಿ ನಿರ್ವಾಹಕರಲ್ಲಿ ಗಲಾಟೆ ಮಾಡುತ್ತಿದ್ದಾರೆ. ವಿದ್ಯುತ್ ಬಿಲ್ ಪಾವತಿಗೂ ಜನ ಕೆಲವೆಡೆ ತಗಾದೆ ತೆಗೆದು ಮೀಟರ್ ರೀಡಿಂಗ್‍ಗೆ ಬಂದ ಸಿಬ್ಬಂದಿಗೆ ಹಲ್ಲೆ ನಡೆಸಿದ ಪ್ರಕರಣಗಳೂ ಅಲ್ಲಲ್ಲಿ ವರದಿಯಾಗಿವೆ. ಯಾವುದೇ ಸ್ಪಷ್ಟತೆ ಇಲ್ಲದೆ ಯೋಜನೆ ಘೋಷಿಸಿದ್ದರ ಪರಿಣಾಮ ಇದಾಗಿದೆ. ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿ ಆರಂಭದಲ್ಲೇ ಗೊಂದಲಮಯವಾಗಿದೆ ಎಂದು ಕಾಮತ್ ಹೇಳಿದರು.
ಗ್ಯಾರಂಟಿಗೆ ಕಂಡೀಶನ್ ಯಾಕೆ? ಗ್ಯಾರಂಟಿ ಯೋಜನೆ ನಿಮಗೂ ಇದೆ, ನಮಗೂ ಇದೆ ಎಂದು ಚುನಾವಣೆ ಭಾಷಣದಲ್ಲಿ ಸಿದ್ದರಾಮಯ್ಯ, ಡಿಕೆಶಿ ಘೋಷಿಸಿದ್ದರು. ಬಸ್‍ನಲ್ಲಿ ಮದುವೆಗೂ ಫ್ರೀ, ದೇವಸ್ಥಾನಕ್ಕೂ ಫ್ರೀ, ಮಾವನ ಮನೆಗೂ ಫ್ರೀ, ತವರು ಮನೆಗೂ ಫ್ರೀ ಎಂದು ಅಂದು ಭಾಷಣ ಬಿಗಿದಿದ್ದರು. ಇದೀಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಇನ್ನು ನಿರುದ್ಯೋಗಿಗಳಿಗೆ ಘೋಷಿಸಿದ ನಿರುದ್ಯೋಗ ಭತ್ಯೆ ಕೇವಲ 2022-23ನೇ ಸಾಲಿನ ನಿರುದ್ಯೋಗಿಗಳಿಗೆ ಮಾತ್ರ ಅನ್ವಯ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕಾಂಗ್ರೆಸ್ ಜನರನ್ನು ಮರಳು ಮಾಡಿ ಅಧಿಕಾರಕ್ಕೇರಿರುವುದು ಸ್ಪಷ್ಟವಾಗಿದೆ. ಗ್ಯಾರಂಟಿ ಜಾರಿಗೆ ನಿಯಮ ತಂದು ಜನರನ್ನು ಕಾಂಗ್ರೆಸ್ ವಂಚಿಸಲು ಹೊರಟಿದೆ. ನಮಗೂ ಫ್ರೀ, ನಿಮಗೂ ಫ್ರೀ ಅಂತ ಹೇಳುವಾಗ ಈ ಎಲ್ಲ ಪುಕ್ಕಟೆ ಯೋಜನೆಗಳಿಗೆ ಸಾವಿರಾರು ಕೋಟಿ ರೂ. ಬಜೆಟ್ ಬೇಕು ಎಂಬ ಕನಿಷ್ಠ ಜ್ಞಾನ ನಿಮಗೆ ಇರಲಿಲ್ಲವೇ ? 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿದ ನೀವು, ಈಗ ಅದು ಕೇವಲ 200 ಯೂನಿಟ್ ಒಳಗೆ ಉಪಯೋಗಿಸಿದವರಿಗೆ ಮಾತ್ರ ಎಂದು ಕಂಡೀಶನ್ ಹಾಕುತ್ತಿದ್ದೀರಿ. ಇದು ಯಾವ ನ್ಯಾಯ ? ಎಂದು ಪ್ರಶ್ನಿಸಿದ ಅವರು, ನೀವು ಘೋಷಿಸಿದ ಎಲ್ಲ ಗ್ಯಾರೆಂಟಿಗಳನ್ನು ಯಾವುದೇ ಶರತ್ತುಗಳು ಇಲ್ಲದೆ ಜಾರಿಗೆ ತನ್ನಿ ಎಂದು ಆಗ್ರಹಿಸಿದರು.