LATEST NEWS
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜಕೀಯ ಹಸ್ತಕ್ಷೇಪ ಸರಿಯಲ್ಲ – ಪದ್ಮರಾಜ್

ಮಂಗಳೂರು ಜುಲೈ 07: ಸಂಸತ್ ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿರುದ್ದ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಕ್ಕೆ ಕಾಂಗ್ರೇಸ್ ಗರಂ ಆಗಿದ್ದು. ಪೇಜಾವರ ಶ್ರೀಗಳು ರಾಜಕೀಯ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು ಧಾರ್ಮಿಕ ಕಾರ್ಯಗಳ ಬಗ್ಗೆ, ಹಿಂದೂ ಸಮಾಜದ ಸಾಮಾಜಿಕ ತಾರತಮ್ಯ ನಿವಾರಣೆಯತ್ತ ಗಮನ ಹರಿಸಲಿ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಅಂದರೆ ಹಿಂದೂ ಸಮಾಜ ಅಂತ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಹಿಂದೂ ಸಮಾಜವನ್ನು ಬಿಜೆಪಿಯವರಿಗೆ ಯಾರೂ ಒತ್ತೆ ಇಟ್ಟಿಲ್ಲ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ. ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದ ವಿಚಾರಗಳ ಬಗ್ಗೆ ಸ್ವಾಮೀಜಿ ಟೀಕೆ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಪಕ್ಷದ ವಕ್ತಾರ ಎಂ.ಜಿ.ಹೆಗಡೆ, ‘ಹಿಂದೂ ಧರ್ಮದ ಉದಾತ್ತ ಧ್ಯೇಯಗಳನ್ನು ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದಾರೆ. ಇದು ಹಿಂದೂಗಳೆಲ್ಲರೂ ಹೆಮ್ಮೆಪಡಬೇಕಾದ ವಿಚಾರ. ಪೇಜಾವರ ಸ್ವಾಮೀಜಿ ಒಂದು ಪಕ್ಷದ ಪರ ಮಾತನಾಡುವುದನ್ನು ಒಪ್ಪಲಾಗದು. ಜನರಿಗೆ ಸತ್ಯ- ಧರ್ಮದ ಮಾರ್ಗದರ್ಶನ ನೀಡಿ. ಗುರು ಪರಂಪರೆಯನ್ನು ಬಿಜೆಪಿ ಮಯ ಮಾಡಬೇಡಿ’ ಎಂದರು. ಅಲ್ಲದೆ ಉಡುಪಿ ಕೃಷ್ಣ ಮಠದಲ್ಲಿರುವ ಎರಡು ಪಂಚಾಗ ಪದ್ದತಿಯನ್ನು ಮೊದಲು ಸರಿಮಾಡಿ ಎಂದು ಸ್ವಾಮಿಜಿಗೆ ಸಲಹೆ ನೀಡಿದರು.