LATEST NEWS
ಹಸ್ತದ ಕೈ ಹಿಡಿದೇ ಮುಂದೆ ಸಾಗಿದ ಪ್ರಮೋದ್ ಮಧ್ವರಾಜ್

ಹಸ್ತದ ಕೈ ಹಿಡಿದೇ ಮುಂದೆ ಸಾಗಿದ ಪ್ರಮೋದ್ ಮಧ್ವರಾಜ್
ಉಡುಪಿ ಮಾರ್ಚ್ 26: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಗೊಂದಲದ ನಡುವೆ ಮಧ್ವರಾಜ್ ಅವರ ಚುನಾವಣಾ ಪ್ರಚಾರ ವಾಹನಕ್ಕೆ ಕಾಂಗ್ರೇಸ್ ಪಕ್ಷದ ಹಸ್ತದ ಗುರುತನ್ನು ಅಂಟಿಸಲಾಗಿದೆ. ಈ ಹಿಂದೆ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುವ ಮಾತು ದಟ್ಟವಾಗಿತ್ತು. ಈ ನಡುವೆ ಅವರ ನಡವಳಿಕೆಗಳೂ ಅನುಮಾನಕ್ಕೆ ಗುರಿಯಾಗಿತ್ತು. ಆದರೆ ಬಿಜೆಪಿ ಸೇರ್ಪಡೆ ವಿಚಾರಕ್ಕೆ ತೆರೆ ಎಳೆದಿರುವ ಪ್ರಮೋದ್ ಮಧ್ವರಾಜ್ ತಮ್ಮ ಪ್ರಚಾರ ವಾಹನಕ್ಕೆ ಹಸ್ತದ ಚಿಹ್ನೆ ಆಳವಡಿಸಿದ್ದಾರೆ.
ಬಿಜೆಪಿ ಸೇರ್ಪಡೆಗೆ ಗೊಂದಲ ಸೃಷ್ಠಿಯಾದ ಕಾರಣ ಮಧ್ವರಾಜ್ ಹಸ್ತದ ಕೈ ಹಿಡಿದೆ ಮುಂದೆ ಸಾಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.
ಕಳೆದ 15 ದಿನದಿಂದ ಪ್ರಮೋದ್ ಮಧ್ವರಾಜ್ ಪಕ್ಷದ ಯಾವುದೇ ಕುರುಹು ಇಲ್ಲದೆ ತಮ್ಮ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಸಿಎಂ ಸಿದ್ದರಾಮಯ್ಯ, ಕೇಂದ್ರ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪಕ್ಷದ ಚಿನ್ಹೆ ಇಲ್ಲದೆ ಮಧ್ವರಾಜ್ ಪ್ರಚಾರ ವಾಹನವನ್ನು ತನ್ನೊಬ್ಬನದ್ದೇ ಕಟೌಟ್ ಹಾಕಿ ಸಿಂಗಾರ ಮಾಡಿದ್ದರು. ಇದು ರಾಜ್ಯವ್ಯಾಪಿ ಸುದ್ದಿಯಾಗಿತ್ತು. ಪಕ್ಷದ ಹಿರಿಯರ ಕೆಂಗಣ್ಣಿಗೂ ಇದು ಕಾರಣವಾಗಿತ್ತು. ಮಧ್ವರಾಜ್ ಅಭಿಮಾನಿಗಳ ಸಂಘ ದ ವತಿಯಿಂದ ವಾಹನ ತಯಾರು ಮಾಡಿರುವುದರಿಂದ ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಆದರೂ ಪ್ರಮೋದ್ ಮಧ್ವರಾಜ್ ಅವರ ಈ ನಡವಳಿಕೆ ಬಗ್ಗೆ ಜಿಲ್ಲಾಧ್ಯಕ್ಷರು ಮುನಿಸಿಕೊಂಡಿದ್ದರು ಎಂದು ಹೇಳಲಾಗಿತ್ತು.
ಈಗ ಎರಡೂ ಪ್ರಚಾರ ವಾಹನದಲ್ಲಿ ಈಗ ಹಸ್ತದ ಚಿನ್ಹೆ ರಾರಾಜಿಸುತ್ತಿದೆ. ವಾಹನಗಳ ಹಿಂದೆ ಮುಂದೆ, ಅಕ್ಕ ಪಕ್ಕ ಹಸ್ತದ ಚಿತ್ರವನ್ನು ಉಡುಪಿ ಪ್ರವಾಸಿ ಮಂದಿರದಲ್ಲಿ ಅಂಟಿಸಿ ವಾಹನಗಳನ್ನು ಪ್ರಚಾರಕ್ಕೆ ಕೊಂಡೊಯ್ಯಲಾಯ್ತು. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರು ಮತದಾರರನ್ನು ತೃಪ್ತಿಪಡಿಸಲು ಪ್ರಮೋದ್ ಮಧ್ವರಾಜ್ ಮುಂದಾಗಿದ್ದಾರೆ.