LATEST NEWS
NH169 ದುರಸ್ಥಿ ಮತ್ತು ಚತುಷ್ಪತ ರಸ್ತೆ ನಿರ್ಮಾಣಕ್ಕೆ ಒತ್ತಾಯ ಐವನ್ ನೇತ್ರತ್ವದಲ್ಲಿ ಬೃಹತ್ ರಸ್ತೆ ತಡೆ

NH169 ದುರಸ್ಥಿ ಮತ್ತು ಚತುಷ್ಪತ ರಸ್ತೆ ನಿರ್ಮಾಣಕ್ಕೆ ಒತ್ತಾಯ ಐವನ್ ನೇತ್ರತ್ವದಲ್ಲಿ ಬೃಹತ್ ರಸ್ತೆ ತಡೆ
ಮಂಗಳೂರು ಅಕ್ಟೋಬರ್ 14: ಮಂಗಳೂರು ಮೂಡಬಿದ್ರೆ ಹಾಗೂ ಕಾರ್ಕಳ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಜನರು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ ಸೋಜಾ ನೇತೃತ್ವದಲ್ಲಿ ರಸ್ತೆಗಿಳಿದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 169 ಯು 20 ವರ್ಷಗಳಿಂದ ಯಾವುದೇ ದುರಸ್ಥಿ ಕಾಣದೇ ರಾಜ್ಯ ಹೆದ್ದಾರಿ ಕಾಮಗಾರಿ ಮಾಡದೇ, 40 ಕಿಮೀ. ಉದ್ದದ ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಜನರ ಜೀವಕ್ಕೆ ಅಪಯಕಾರಿ ರೀತಿಯಲ್ಲಿ ಜನರ ಜೀವನದಲ್ಲಿ ಚೆಲ್ಲಾಟ ಮಡುತ್ತಿರುವ ಸರ್ಕಾರದ ವಿರುದ್ದ ಮಂಗಳೂರು ಹೊರವಲಯದ ಗುರುಪುರ ಬಳಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಮೂಡಬಿದ್ರೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169 ಸಂಪೂರ್ಣ ಹದಗೆಟ್ಟಿದ್ದು ದಿನಂಪ್ರತಿ ರಸ್ತೆಯಲ್ಲಿ ಸಾಲು ಸಾಲು ರಸ್ತೆ ಅಪಘಾತಗಳು ನಡೆಯುತ್ತಿವೆ. ಹದಗೆಟ್ಟ ರಸ್ತೆಗಳಿಂದಾಗಿ ಅಪುಘಾತದಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇದು ರಸ್ತೆಯ ದುಸ್ಥಿತಿಯ ಕಥೆಯಾದರೆ ಈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಿಟೀಷ್ ಕಾಲದ ಅತಿ ಪುರಾತನ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಈ ಸೇತುವೆ ಮೂಲಕ ಹಾದು ಹೋಗುವ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸೇತುವೆ ಮೂಲಕ ಹಾದು ಹೋಗುವ ಪರಿಸ್ಥಿತಿ ಇದೆ.

ಈ ಕುರಿತು ರಸ್ತೆ ದುರಸ್ಥಿಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಬೇಸತ್ತು ನಾಗರೀಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ ಹಾಗೂ ಸ್ಥಳೀಯ ಶಾಸಕ ಮೊಯಿದ್ದಿನ್ ಬಾವಾ ಅವರ ನೇತೃತ್ವದಲ್ಲಿ ಸ್ಥಳೀಯ ನಾಗರೀಕರು, ವಾಹನ ಚಾಲಕರು ಇಂದು ಪ್ರತಿಭಟನಾ ಜಾಥಾ ನಡೆಸಿದರು. ಕೇಂದ್ರ ಸರಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಶಿಥಿಲಗೊಂಡ ಸೇತುವೆ ಬಂದ್ ಮಾಡಿ ರಸ್ತೆ ತಡೆ ನಡೆಸಿದರು.
ಐವನ್ ಪ್ರಧಾನಿ ವಿರುದ್ದ ವಾಗ್ದಾಳಿ
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ನ ಮುಖ್ಯ ಸಚೇತಕ ಜನರ ಮನದ ಮಾತನ್ನು ಆಲಿಸದ ಕೇಂದ್ರದ ಬಿಜೆಪಿ ಸರಕಾರದ ಪ್ರಧಾನ ಮಂತ್ರಿ ಅವರು ಮನ್ ಕಿ ಬಾತ್ ಕಾರ್ಯಕ್ರಮ ನೀಡುತ್ತಿದ್ದಾರೆ. ಆದರೆ ಈಗ ಮನ್ ಕಿ ಬಾತ್ ಕೇಸರಿ ಬಾತ್ ಆಗಿದೆ ಎಂದು ವ್ಯಂಗ್ಯಮಾಡಿದರು. ನಂಬರ್ ಒನ್ ಸಂಸದರು ಎಂದು ಹೇಳಿಕೊಳ್ಳುವ ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲಿಯ ಜನರ ಸಮಸ್ಯೆಯೇ ಅರ್ಥವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಹಳೆಯ ರಾಷ್ಟ್ರೀಯ ಹೆದ್ದಾರಿ 169 ದ್ವಿಪಥ ರಸ್ತೆಗಳನ್ನು ಕೂಡಲೇ ದುರಸ್ಥಿಗೊಳಿಸಿ ಚತುಷ್ಪತ ರಸ್ತೆಯಾಗಿ ಪರಿವರ್ತಿಸಬೇಕೆಂದು ಒತ್ತಾಯಿಸಿದರು. ಚತುಷ್ಪತ ರಸ್ತೆ ಕಾಮಗಾರಿ ಈ ಕೂಡಲೇ ಆರಂಭಿಸಬೇಕೆಂದು ಒತ್ತಾಯಿಸಿದ ಅವರು 94 ವರ್ಷ ಹಳೆಯ ಸೇತುವೆ ಶಿಥಿಲಾವಸ್ಥೆಯಲ್ಲಿದ್ದು ಬದಲಿ ವ್ಯವಸ್ಥೆಯಡಿ ಈ ಕೂಡಲೇ ನೂತನ ಸೇತುವೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಪರಾರಿ ಬಳಿ ಸೇತುವೆ ಮೇಲೆ ಪ್ರತಿಭಟನಾಕಾರರು ರಸ್ತೆ ನಡೆಸಿದ ಹಿನ್ನಲೆಯಲ್ಲಿ ಅರ್ಧ ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಪ್ರತಿಭಟನೆಯಲ್ಲಿ ಜನರು ಇಟ್ಟ ಪ್ರಮುಖ ಬೇಡಿಕೆಗಳು :
1. ಹಳೆಯ ರಾಷ್ಟ್ರೀಯ ಹೆದ್ದಾರಿ13 (169) 2ಪಥ ರಸ್ತೆಗಳನ್ನು ಕೂಡಲೇ ದುರಸ್ಥೀಕರಣ ಕೈಗೊಳ್ಳಬೇಕು ಮತ್ತು 40 ಕಿ.ಮೀ. ಉದ್ದದ ರಸ್ತೆಯನ್ನು ಡಾಮರೀಕರಣಗೊಳಿಸಬೇಕು.
2. ರಾಷ್ಟ್ರೀಯ ಹೆದ್ದಾರಿ ಚತುಷ್ಪತ ರಸ್ತೆ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು.
3. ರಾಷ್ಟ್ರೀಯ ಹೆದ್ದಾರಿ ಉದ್ದಕ್ಕೂ ಸ್ಥಳ ಕಳೆದುಕೊಂಡವರ ಬೇಡಿಕೆ ಈಡೇರಿಸಿ, ಅಗತ್ಯ ಪರಿಹಾರವನ್ನು ಒದಗಿಸಿ ಕೂಡಲೇ ಜಿಲ್ಲಾಡಳಿತದಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ರಸ್ತೆ ಕಾಮಗಾರಿ ಪ್ರಾರಂಭಗೊಳ್ಳಲು ಹಸಿರು ನಿಶಾನೆ ತೋರಿಸಬೇಕು
3. ರಾ.ಹೆದ್ದಾರಿ ಕಾಮಗಾರಿಯನ್ನು ಯೋಜನಾ ನಿರ್ದೇಶಕರ ಕಛೇರಿಯನ್ನು ಮೂಡಬಿದ್ರೆಯಲ್ಲಿ ಸ್ಥಾಪಿಸಬೇಕು
ಮತ್ತು ಜನಸಾಮಾನ್ಯರ ಸಮಸ್ಯೆಯನ್ನು ಆಲಿಸಬೇಕು
4. 94 ವರ್ಷಗಳ ಹಳೆಯದಾದ ಸೇತುವೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದು ಸಂಚಾರಕ್ಕೆ ಸುರಕ್ಷಿತ ಅಲ್ಲ ಎಂದು ತಿಳಿದಲ್ಲಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಕೂಡಲೇ ಕಲ್ಪಿಸದಿದ್ದಲ್ಲಿ ತೀವ್ರತರವಾದ ಹೋರಾಟವನ್ನು ಮಾಡಲಾಗುವುದು. ಹಾಗೂ ಇದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೇರ ಹೋಣೆಯಾಗಲಿದೆ ಎಂದು ತಿಳಿಸಬಯಸುತ್ತೇವೆ.
ಪ್ರತಿಭಟನೆಯಲಿ ಜಿ. ಪಂ ಸದಸ್ಯ ಯು.ಪಿ. ಇಬ್ರಾಹಿಂ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ತಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಗಣೇಶ್, ಸದಸ್ಯರಾದ ಸಚಿನ್ , ಕೆ.ಡಿಸಿಸಿ ಸದಸ್ಯ ಪ್ರಥ್ವಿರಾಜ್, ಸಿರಾಜುದ್ದೀನ್, ವಿಲ್ಫಿ ಮೆಂಡೋನ್ಸಾ, ಕೃಷ್ಣ ಡಿ. ಅಂಚನ್, ನಾಗೇಂದ್ರ ಕುಮಾರ್ ಸಾಹುಲ್ ಅಮೀದ್, ಯಶವಂತ್, ಮಾಜಿ ಜಿ.ಪಂ ಸದಸ್ಯ ಮೆಲ್ವಿನ್ ಡಿ’ ಸೊಜಾ, ಚಂದ್ರಶೇಖರ್ ಗಟ್ಟಿ, ಎನ್.ಪಿ. ಮನುರಾಜ್, ಸತೀಶ್ ಪೆಂಗಲ್ ಪದ್ಮರಾಜ್ ಜೈನ್, ಪಿಯೂಸ್ ಮೊಂತೆರೊ, ಅನಿಲ್ ತೋರಸ್, ಶೇಖರ್ ದೇರಲಕಟ್ಟೆ, ವಸಂತ್ ಶೆಟ್ಟಿ ರಿಕ್ಷಾ ಚಾಲಕರು, ಟೆಂಪೋಚಾಲಕರು ಬಸ್ಸು ಚಾಲಕರು, ಹಾಗೂ ಅಪರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.