KARNATAKA
ಕಾರ್ಯಕರ್ತರ ಒತ್ತಡ ಹಿನ್ನೆಲೆ : ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಅವ್ಯವಹಾರ ಸಿಐಡಿ ತನಿಖೆಗೆ ಸಿಎಂ ಆದೇಶ..!
ಕಾರ್ಕಳ : ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ.
ತನಿಖೆ ನಡಸುವಂತೆ ಕಾರ್ಯಕರ್ತರ ಒತ್ತಡ ಹೆಚ್ಚಿದ್ದರಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಅವರ ಶಿಫಾರಸಿನಂತೆ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಳೀಯ ಶಾಸಕ ಮಾಜಿ ಸಚಿವ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿದ್ದ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಅಳವಡಿಸಿದ್ದ ಪರಶುರಾಮ ದೇವರ ಮೂರ್ತಿ ನಕಲಿ ಎಂಬ ಆರೋಪ ಕೇಳಿ ಬಂದಿತ್ತು ಮತ್ತು ಗೋಮಾಳದಲ್ಲಿ ಥೀಂ ಪಾರ್ಕ್ ನಿರ್ಮಾಣಗೊಂಡಿದೆ ಎಂದು ಆರೋಪಿಸಲಾಗಿತ್ತು. ಸದ್ಯ ಸ್ಥಳದಿಂದ ಮೂರ್ತಿಯನ್ನು ನಿರ್ಮಿತಿ ಕೇಂದ್ರ ತೆರವು ಮಾಡಿದ್ದು ಅರ್ಧ ಮೂರ್ತಿ ಮಾತ್ರ ಇದೆ. ಈ ಹಗರಣದ ಕುರಿತು ಕಾಂಗ್ರೆಸ್ ಪ್ರತಿಭಟನೆ ಕೂಡ ನಡೆಸಿತ್ತು. ಪರಶುರಾಮ ಥೀಮ್ ಪಾರ್ಕ್ ಕಾಮಗಾರಿ ಜೊತೆಗೆ ಧಾರ್ಮಿಕ ಭಾವನೆಗಳಿಗೆ ಅಪಪ್ರಚಾರವಾಗಿರುವ ಸಂಬಂಧ ಸಾರ್ವಜನಿಕರಿಂದ ಭಾರೀ ದೂರು ಕೇಳಿ ಬಂದಿತ್ತು. ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಥೀಮ್ ಪಾರ್ಕ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್. ಹೆಬ್ಬಾಳ್ಕರ್ ಅವರು ಫೆ.2ರಂದು ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರಂತೆ ಇದೀಗ ಮುಖ್ಯಮಂತ್ರಿ ಸಿಓಡಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.