LATEST NEWS
ತಿಂಗಳಲ್ಲಿ 24 ಗಂಟೆ ಈ ಚಪ್ಪಲಿ ಹಾಕಿದ್ರೆ ಕೊಡ್ತಾರೆ ದೊಡ್ಡ ಮೊತ್ತದ ಸಂಬಳ!
ಲಂಡನ್, ಜನವರಿ 13: ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಬ್ರಿಟನ್ನ ಬೆಡ್ರೂಂ ಅಥ್ಲೆಟಿಕ್ಸ್ ಸಂಸ್ಥೆ ಒಳ್ಳೆಯ ಆಫರ್ ತಂದಿದೆ. ಅವರ ಸಂಸ್ಥೆಯ ಚಪ್ಪಲಿಯನ್ನು ತಿಂಗಳಿಗೆ 24 ಗಂಟೆ ಧರಿಸುವವರಿಗೆ ಸಂಸ್ಥೆ ಭಾರಿ ಮೊತ್ತದ ಸಂಬಳ ನೀಡಲು ಸಿದ್ಧವಾಗಿದೆ.
ಇಂತದ್ದೊಂದು ವಿಶೇಷ ಆಫರ್ನ್ನು ಬ್ರಿಟನ್ನ ಬೆಡ್ರೂಂ ಅಥ್ಲೆಟಿಕ್ಸ್ ಸಂಸ್ಥೆ ನೀಡುತ್ತಿದೆ. ಈ ಸಂಸ್ಥೆ ಚಳಿಗಾಲಕ್ಕೆಂದು ವಿಶೇಷ ಚಪ್ಪಲಿಯನ್ನು ತಯಾರಿಸಿದೆ. ಈ ಚಪ್ಪಲಿ ಗುಣಮಟ್ಟವನ್ನು ಪರೀಕ್ಷಿಸಲೆಂದು ಒಬ್ಬ ಮಹಿಳೆ ಮತ್ತು ಒಬ್ಬ ಪುರುಷನನ್ನು ಕೆಲಸಕ್ಕೆ ತೆಗೆದುಕೊಳ್ಳಲು ನಿರ್ಧರಸಿದೆ. ಈ ಕೆಲಸಕ್ಕೆ ಬರುವವರು ಮಾಡುವಂತದ್ದೇನಿಲ್ಲ. ಸಂಸ್ಥೆ ಕೊಡುವ ಚಪ್ಪಲಿಯನ್ನು ತಿಂಗಳ ಯಾವುದಾದರೂ ಎರಡು ದಿನ ತಲಾ 12 ಗಂಟೆಗಳ ಕಾಲ ಧರಿಸಬೇಕು. ಒಟ್ಟಿನಲ್ಲಿ ತಿಂಗಳಿಗೆ ಕೇವಲ 24 ತಾಸು ಧರಿಸಿದರೆ ಸಾಕು. ಈ ರೀತಿ ಒಂದು ವರ್ಷ ಮಾಡಬೇಕು. ಅದಕ್ಕೆ ಸಂಸ್ಥೆ ವರ್ಷಕ್ಕೆ ಬರೋಬ್ಬರಿ 4 ಲಕ್ಷ ರೂಪಾಯಿ ನೀಡಲಿದೆ. ಹಾಗೆಯೇ ಈ ಇಬ್ಬರು ಕೆಲಸಗಾರರಲ್ಲಿ ಒಬ್ಬರಿಗೆ 12 ಜತೆ ಚಪ್ಪಲಿಯನ್ನು ಉಚಿತವಾಗಿ ಕೊಡಲಿದೆ.
ಗ್ರಾಹಕರಿಗೆ ಉತ್ತಮ ಗುಣಮಟ್ಟದ ಚಪ್ಪಲಿ ನೀಡಬೇಕು ಎನ್ನುವ ಕಾರಣದಿಂದ ಈ ರೀತಿಯ ರಿಯಲ್ ಕ್ವಾಲಿಟಿ ಚೆಕರ್ನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದುಕೊಂಡಿರುವುದಾಗಿ ಸಂಸ್ಥೆ ಹೇಳಿಕೊಂಡಿದೆ. ಬೆಡ್ರೂಂ ಅಥ್ಲೆಟಿಕ್ಸ್ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ನೀವೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಯಾರನ್ನು ಕೆಲಸಕ್ಕೆ ಆಯ್ಕೆ ಮಾಡಬೇಕು ಎನ್ನುವುದು ಮಾತ್ರ ಸಂಸ್ಥೆಗೆ ಬಿಟ್ಟ ವಿಚಾರವಾಗಿದೆ.