DAKSHINA KANNADA
ವಿವಾದಿತ ಮಂಗಳೂರು ವಾಮಂಜೂರಿನ ಅಣಬೆ ಫ್ಯಾಕ್ಟರಿ ಪ್ರದೇಶಕ್ಕೆ ಮೇಯರ್ ನೇತ್ರತ್ವದ ಪಾಲಿಕೆ ಸಮಿತಿ ಭೇಟಿ, ಫ್ಯಾಕ್ಟರಿ ಬಂದ್ ಮಾಡಲು ಆಗ್ರಹ..!
ಮಂಗಳೂರು : ತೀವ್ರ ವಿವಾದದ ಕೇಂದ್ರ ಬಿಂದುವಾಗಿರುವ ಮಂಗಳೂರು ವಾಮಂಜೂರಿನ ವೈಟ್ ಗ್ರೊ ಅಣಬೆ ಫ್ಯಾಕ್ಟರಿ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಉನ್ನತ ಅಧಿಕಾರಿಗಳು, ಪಾಲಿಕೆ ಸದಸ್ಯರುಗಳನ್ನೊಳಗೊಂಡ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೇತ್ರತ್ವದ ಉನ್ನತ ಮಟ್ಟದ ನಿಯೋಗ ಭೇಟಿ ನೀಡಿ ಸ್ಥಳೀಯರ ಅಹವಾಲು ಆಲಿಸಿ, ಅಣಬೆ ಫ್ಯಾಕ್ಟರಿಯನ್ನು ಪರೀಶಿಲಿಸಿದರು.
ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಪಾಲಿಕೆ ಆಯುಕ್ತರು, ಮುಖ್ಯ ಸಚೇತಕರು, ಪ್ರತಿಪಕ್ಷ ನಾಯಕರು, ಸ್ಥಳೀಯ ಪಾಲಿಕೆ ಸದಸ್ಯರು, ಆರೋಗ್ಯಾಧಿಕಾರಿಗಳು, ಪರಿಸರ ಮಾಲಿನ್ಯ ಅಧಿಕಾರಿಗಳು, ಎನ್‌ಐಟಿಕೆಯ ತಜ್ಞರು ಭೇಟಿ ಮಾಡಿದ ಸಮಿತಿಯಲ್ಲಿದ್ದರು.
ಆರಂಭದಲ್ಲಿ ಅಣಬೆ ಫ್ಯಾಕ್ಟರಿಯಿಂದ ಹೊರ ಸೂಸುವ ಮಾಲಿನ್ಯದಿಂದ ನೇರಾ ಸಮಸ್ಯೆಗಳನ್ನು ಎದುರಿಸುತ್ತಿರುವ ಆಶ್ರಯ ಕಾಲನಿಗೆ ಭೇಟಿ ನೀಡಿದ ನಿಯೋಗಕ್ಕೆ ನೂರಾರು ಜನ ಸ್ಥಳೀಯರು ಮುತ್ತಿಗೆ ಹಾಕಿ ತಾವು ಅನುಭವಿಸುತ್ತಿರುವ ನರಕ ಯಾತನೆ, ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿ ಇಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಘಟಕದಿಂದ ದುರ್ನಾತವಿಲ್ಲ ಎಂಬುದಾಗಿ ಜಿಲ್ಲಾಡಳಿತಕ್ಕೆ ವರದಿ ನೀಡಿದ್ದ ಆಯುಕ್ತರನ್ನು ಗ್ರಾಮಸ್ಥರು ತರಾಟೆಗೆ ತೆಗೆದು ಕೊಂಡರು.
ಈ ಸಂದರ್ಭ ಮನಪಾ ಆಯುಕ್ತರು ಸಮಜಾಯಿಸಿಕೆ ನೀಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ‘ನೀವು ಯಾರ ಪರವಾಗಿ ಬಂದಿದ್ದೀರಿ? ನಾವು ಮನವಿ ಸಲ್ಲಿಸಲು ಬಂದಾಗ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ ಎಂದು ತರಾಟೆಗೆ ತಗೊಂಡರು.
ಎಲ್ಲರ ದುಃಖ, ಅಹವಾಲುಗಳನ್ನು ಮೇಯರ್ ಅವರು ಸಮಾಧಾನದಿಂದಲೇ ಆಲಿಸಿ ಎಲ್ಲರ ಒಮ್ಮತದ ಪರಿಹಾರ ಸೂತ್ರದ ಭರವಸೆ ನೀಡಿದರು.
ಅಣಬೆ ಫ್ಯಾಕ್ಟರಿಗೂ ಭೇಟಿ ನೀಡಿದ ಸಮಿತಿ ಅಲ್ಲಿನ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿ ಘಟಕದ ಕಾರ್ಯ ವಿಧಾನವನ್ನು ಕೂಲಂಕೂಶವಾಗಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಫ್ಯಾಕ್ಟರಿ ಆಡಳಿತ ಸಿಬಂದಿ ಮತ್ತು ಸ್ಥಳೀಯರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಯಿತು.
ಬಳಿಕ ಸುದ್ದಿಗಾರೆರೊಂದಿಗೆ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಎಲ್ಲವನ್ನೂ ಪರೀಶೀಲಿಸಲಾಗಿದೆ, ಸಮಸ್ಯೆಯಿಂದ ಬಳಲುತ್ತಿರುವ ಜನರ ಅಹವಾಲು, ನೋವುಗಳನ್ನು ಆಲಿಸಿದ್ದೇವೆ. ಇಂದು ಸಂಜೆ ಪಾಲಿಕೆಯಲ್ಲಿ ನಿಯೋಜಿತ ಸಮಿತಿ ಮತ್ತು ಫ್ಯಾಕ್ಟರಿ ಆಡಳಿತ ನಡೆಸುವವರೊಂದಿಗೆ ತುರ್ತು ಸಭೆ ನಡೆಸಿ ಆ ಸಭೆಯಲ್ಲಿ ಪ್ರಸ್ತುತ ಜನ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡಸುತ್ತೇವೆ. ಅದರಲ್ಲಿ ಕೈಗೊಳ್ಳಬಹುದಾದ ಪರ್ಯಾಯ ಮಾರ್ಗಗಳು ಅಥವಾ ಅಣಬೆ ಘಟಕದ ಸ್ಥಳಾಂತರ ಬಗ್ಗೆ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ವರದಿ ಒಪ್ಪಿಸುತ್ತೇವೆ. ಬಳಿಕ ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಅಣಬೆ ಫ್ಯಾಕ್ಟರಿಗೆ ಪಾಲಿಕೆ ಅನುಮತಿ ನೀಡಿದ್ದು ಆ ಅನುಮತಿ ಶರ್ತಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ಅದರ ಲೈಸನ್ಸ್ ರದ್ದು ಮಾಡಲಾಗುವುದು ಎಂದರು.