Connect with us

DAKSHINA KANNADA

ಮಂಗಳೂರಿನಲ್ಲಿ ಪೇಯಿಂಗ್ ಗೆಸ್ಟ್ , ಹಾಸ್ಟೆಲ್, ಹೋಮ್ ಸ್ಟೇ ಗಳಿಗೆ ನಿಯಮ ಕಟ್ಟುನಿಟ್ಟುಗೊಳಿಸಿದ ಪೊಲೀಸ್ ಆಯುಕ್ತ

ಮಂಗಳೂರು, ಡಿಸೆಂಬರ್ 24: ಮಂಗಳೂರು ನಗರದಲ್ಲಿ ಪೇಯಿಂಗ್ ಗೆಸ್ಟ್ (ಪಿಜಿ), ಹಾಸ್ಟೆಲ್, ಹೋಮ್ ಸ್ಟೇ ಇತ್ಯಾದಿಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿ ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಆದೇಶ ಹೊರಡಿಸಿದ್ದಾರೆ.

ಹಾಸ್ಟೆಲ್, ಹೋಂ ಸ್ಟೇ, ಪೇಯಿಂಗ್ ಗೆಸ್ಟ್, ಸರ್ವಿಸ್ ಅಪಾರ್ಟ್‌ಮೆಂಟ್, ವಾಣಿಜ್ಯ ಉದ್ದೇಶದ ಗೆಸ್ಟ್ ಹೌಸ್, ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ವಸತಿ ಗೃಹಗಳ ಮಾಲಕರು/ಪಾಲುದಾರರು, ಆಡಳಿತ ಮಂಡಳಿಯ ಮುಖ್ಯಸ್ಥರು ಸಂಬಂಧಿಸಿದ ಇಲಾಖೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.

ಮಾಲಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ಹಾಗೂ ಸಂಸ್ಥೆಯ ರಿಜಿಸ್ಟರ್ ಪುಸ್ತಕವನ್ನು ಕಡ್ಡಾಯವಾಗಿ ಪ್ರತೀ ವರ್ಷ ಪೊಲೀಸ್ ಆಯುಕ್ತರ ಕಚೇರಿಗೆ ಹಾಜರುಪಡಿಸಬೇಕು. ಅಲ್ಲದೆ ಮಾಲಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಗುರುತಿನ ಚೀಟಿಯನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು.

ವಿದೇಶಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ 24 ಗಂಟೆಗಳೊಳಗೆ ಅವರ ಪೂರ್ಣ ಮಾಹಿತಿಯನ್ನು ಪಾಸ್‌ಪೋರ್ಟ್, ವೀಸಾದ ವಿವರ ಸಹಿತವಾಗಿ ನೀಡಬೇಕು. ಅವರು ವಾಸ್ತವ್ಯ ತೆರವುಗೊಳಿಸಿದಾಗಲೂ ಮಾಹಿತಿ ನೀಡಬೇಕು ಎಂದು ಸೂಚಿಸಿದ್ದಾರೆ.

ಉತ್ತಮ ಗುಣಮಟ್ಟದ ಸಿಸಿ ಕೆಮರಾಗಳನ್ನು ಅಳವಡಿಸಬೇಕು. ಅವುಗಳಲ್ಲಿ ಒಂದು ಕ್ಯಾಮರಾ ಮುಖ್ಯ ದ್ವಾರಕ್ಕೆ/ರಸ್ತೆಗೆ ಮುಖ ಮಾಡಿರುವಂತೆ ಅಳವಡಿಸಿರಬೇಕು. ಸಿಸಿ ಕ್ಯಾಮರಾಗಳ ಫೂಟೇಜ್‌ಗಳು ಕನಿಷ್ಠ 30 ದಿನಗಳವರೆಗೆ ವೀಕ್ಷಣೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಠಾಣಾಧಿಕಾರಿಗಳು ಕೇಳಿದಾಗ ಮಾಹಿತಿ ಸಲ್ಲಿಸಬೇಕು.

ಅಪರಾಧದ ಕೃತ್ಯಗಳು, ಮಾದಕ ದ್ರವ್ಯ ಮತ್ತು ಅನೈತಿಕ ಹಾಗೂ ಇತರ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಎಲ್ಲಾ ಪೇಯಿಂಗ್ ಗೆಸ್ಟ್‌ಗಳಲ್ಲಿ ಮಂಗಳೂರು ನಗರ ವ್ಯಾಪ್ತಿಯ ಅತಿಥಿಗಳನ್ನು ಹೊರತುಪಡಿಸಿ ಉಳಿದ ಅತಿಥಿಗಳಿಗೆ ಅವರ ಮೂಲ ವಿಳಾಸಕ್ಕೆ ಸಂಬಂಧಿಸಿದ ಪೊಲೀಸ್ ಕಚೇರಿಯಿಂದ ಕಡ್ಡಾಯವಾಗಿ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದುಕೊಳ್ಳಬೇಕು.

ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಸಂಬಂಧಪಟ್ಟವರು ವಹಿಸಿಕೊಂಡು ಈ ಬಗ್ಗೆ ಮುಚ್ಚಳಿಕೆ ಪ್ರಮಾಣ ಪತ್ರವನ್ನು ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಬೇಕು ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *