FILM
ಕಾಮಿಡಿ ಕಿಲಾಡಿ-3 ವಿನ್ನರ್, ಪ್ರತಿಭಾನ್ವಿತ ಕಲಾವಿದ ರಾಕೇಶ್ ಪೂಜಾರಿ ಇನ್ನಿಲ್ಲ!

ಉಡುಪಿ, ಮೇ 12: ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ದಿಢೀರ್ ಸಾವನ್ನಪ್ಪಿದ್ದಾರೆ.
ನಿನ್ನೆಯತನಕವೂ ಆರೋಗ್ಯವಾಗಿ ಗಟ್ಟಿಮುಟ್ಟಾಗಿದ್ದ ಕಲಾವಿದ ರಾಕೇಶ್ ಪುಜಾರಿ ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ. ಅವರ ಆಪ್ತರು ನೀಡಿರುವ ಮಾಹಿತಿ ಪ್ರಕಾರ ನಿನ್ನೆ ಊರಲ್ಲಿ ನಡೆದ ಮದುವೆಯ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅಲ್ಲಿ ಡ್ಯಾನ್ಸ್ ಮಾಡಿ ಎಲ್ಲರ ಜೊತೆ ಖುಷಿಯಿಂದ ಕಾಲ ಕಳೆದಿದ್ದರು ಎನ್ನಲಾಗಿದೆ. ರಾಕೇಶ್ ನಿಧನ ಸುದ್ದಿ ಕನ್ನಡ ಕಿರುತೆರೆ ಲೋಕ, ತುಳು ರಂಗಭೂಮಿ ಕಲಾವಿದರಿಗೂ ಅಚ್ಚರಿ ತಂದಿದೆ.

ಕಾಮಿಡಿ ಕಿಲಾಡಿ ವಿನ್ನರ್ ರಾಕೇಶ್ ಪೂಜಾರಿ ಅವರ ನಿಧನದಿಂದ ಎಲ್ಲರಿಗೂ ಶಾಕ್ ಆಗಿದ್ದು, ಅದೇ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕೂಡ ‘ಮಿಸ್ ಯೂ ಮಗನೇ.. ನಾನು ಇನ್ಯಾವತ್ತೂ ನಿನ್ನ ಜೊತೆ ಮಾತನಾಡಲು ಆಗಲ್ಲ, ಕಾಮಿಡಿ ಕಿಲಾಡಿ ನನ್ನ ಹೃದಯಕ್ಕೆ ಹತ್ತಿರವಾದ ಕಾರ್ಯಕ್ರಮ. ನೀನು ಅದರಲ್ಲಿ ಒಂದು ಶಕ್ತಿ ಆಗಿದ್ದೆ. ನಿನ್ನಂತಹ ಅದ್ಭುತ ವ್ಯಕ್ತಿ ನಮ್ಮ ಹೃದಯಲ್ಲಿ ನೆಲೆಸಿರುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಮೃತ ರಾಕೇಶ್ ಪೂಜಾರಿ ಅವರ ಆಪ್ತರೂ ಹೇಳುವ ಪ್ರಕಾರ, ರಾಕೇಶ್ ಪೂಜಾರಿ ಆರೋಗ್ಯವಾಗಿದ್ದರು. ನಿನ್ನೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಬಳಿಕ ಅವರಿಗೆ ದಿಢೀರ್ ಬಿಪಿ ಲೋ ಆಗಿದೆ ಎಂದು ತಿಳಿದು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಯಿತಾದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದರು ಎಂದು ವೈದ್ಯರು ಘೋಷಿಸಿದರು ಎಂದು ತಿಳಿದು ಬಂದಿದೆ.
ರಾಕೇಶ್ ಮಂಗಳೂರಿನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ‘ಕಡ್ಲೆ ಬಜಿಲ್’ ತುಳು ಕಾರ್ಯಕ್ರಮದಲ್ಲಿ ನಟಿಸಿದ್ದರು. ಅವರು ಪೈಲ್ವಾನ್, ಇದು ಎಂತ ಲೋಕವಯ್ಯ ಕನ್ನಡದಲ್ಲಿ ಮತ್ತು ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್, ಪಮ್ಮನ್ನೆ ದಿ ಗ್ರೇಟ್, ಉಮಿಲ್ ಮತ್ತು ಇಲ್ಲೊಕ್ಕೆಲ್ ತುಳುವಿನಲ್ಲಿ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅವರು ಬಲೆ ತೆಲಿಪಾಲೆ, ಮೇ 22, ಸ್ಟಾರ್, ತೂಯಿನಾಯೆ ಪೋಯೆ ಮುಂತಾದ ಕರಾವಳಿ ರಿಯಾಲಿಟಿ ಶೋಗಳಲ್ಲಿ ಪ್ರದರ್ಶನ ನೀಡಿದ್ದಾರೆ.