LATEST NEWS
ವಿಧಾನಸಭೆ ಚುನಾವಣೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸತತ ಕೂಂಬಿಂಗ್ – ಎಸ್ಪಿ ರವಿಕಾಂತೇ ಗೌಡ

ವಿಧಾನಸಭೆ ಚುನಾವಣೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸತತ ಕೂಂಬಿಂಗ್ – ಎಸ್ಪಿ ರವಿಕಾಂತೇ ಗೌಡ
ಮಂಗಳೂರು ಮೇ 9: ಮೇ 12 ರಂದು ಜಿಲ್ಲೆಯಲ್ಲಿ ಮತದಾರರು ಸುಸೂತ್ರವಾಗಿ ಮತ ಚಲಾವಣೆ ಮಾಡಲು ಬೇಕಾದ ಅಗತ್ಯ ಭದ್ರತಾ ಕ್ರಮಗಳನ್ನು ಪೋಲಿಸ್ ಇಲಾಖೆ ಕೈಗೊಂಡಿದೆ. ಹಾಗಾಗಿ ನಿರ್ಭೀತಿಯಿಂದ ಮತದಾರರು ಮತ ಚಲಾವಣೆ ಮಾಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಡಾ. ರವಿಕಾಂತೇ ಗೌಡ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನ ಶಾಂತಿ ಮತ್ತು ಸುಸೂತ್ರವಾಗಿ ನಡೆಯಲು ಬೇಕಾದ ಎಲ್ಲಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಜಿಲ್ಲೆಯ ಗಡಿ ಭಾಗಗಳಲ್ಲಿ 23 ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಅಲ್ಲಿ ಸಿಸಿ ಟಿವಿಗಳ ಕಣ್ಗಾವಲು, ಕೇಂದ್ರೀಯ ಭಧ್ರತಾ ಪಡೆಗಳ ಯೋಧರನ್ನು ನಿಯೋಜಿಸಲಾಗಿದೆ. ಜಿಲ್ಲೆ ಆಗಮಿಸುವ ಎಲ್ಲಾ ವಾಹನ ಹಾಗೂ ಅಪರಿಚಿತ ವ್ಯಕ್ತಿಗಳ ಚಲನಾವಲನಗಳ ಮೇಲೆ ನಿಗಾ ಇರಿಸಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳ 64 ಮತಗಟ್ಟೆಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 980 ಮತಗಟ್ಟೆಗಳಿವೆ. ಇವುಗಳ ಭಧ್ರತೆಗೆ ಮೂರು ಸಾವಿರ ಪೋಲಿಸರ ನಿಯೋಜನೆ ಮಾಡಲಾಗಿದೆ. ಇದಲ್ಲದೇ 1400 ಕೆಂದ್ರೀಯ ಭದ್ರತಾ ಪಡೆಗಳ ಅಧಿಕಾರಿ ಮತ್ತು ಸಿಬಂದಿ, ಒಂದು ರಾಪಿಡ್ ಆ್ಯಕ್ಷನ್ ಫೊರ್ಸ್, ಹಾಗೂ ಮೂರು ಕೆ ಎಸ್ ಆರ್ ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳ ಬೂತ್ ಗಳನ್ನು ಖುದ್ದಾಗಿ ಸಮೀಕ್ಷೆ ಮಾಡಲಾಗಿದ್ದು, ನಕ್ಸಲ್ ನಿಗ್ರಹ ಪಡೆ ಸತತವಾಗಿ ಕೂಬಿಂಗ್ ಮಾಡಿ ಈ ಪ್ರದೇಶದ ಜನರಿಗೆ ವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ನೀತಿ ಸಂಹಿತೆ ಜಾರಿಯಾದ ಬಳಿಕ ಜಿಲ್ಲೆಯಲ್ಲಿ 4 ಕ್ರಮಿನಲ್ ಸೇರಿದಂತೆ ಒಟ್ಟು 10 ಪ್ರಕರಣ ದಾಖಲಾಗಿದೆ. 21 ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ದಾಖಲೆ ರಹಿತ 4 ಲಕ್ಷ ರೂಪಾಯಿಗಳನ್ನು 6.8 ಕೆ.ಜಿ ಗಾಂಜ 1222 ಸೀರೆಗಳನ್ನು ವಶಕ್ಜೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.