KARNATAKA
ಬಾಲಕನಿಗೆ ನಾಗನ ಕಾಟ, 2 ತಿಂಗಳಲ್ಲಿ 9 ಬಾರಿ ಹಾವು ಕಚ್ಚಿದ್ರೂ ಬದುಕುಳಿದ ಪ್ರಜ್ವಲ್..!
ಹಾವಿನ ದ್ವೇಷ ಹನ್ನೆರಡು ವರುಷ ಅಂತಾರೆ ಹಿರಿಯರು. ಇದೇ ಮಾತಿನಂತೆ ಇಲ್ಲೋರ್ವ 14 ವರ್ಷದ ಬಾಲಕನಿಗೆ ನಾಗರಾಜನ ಕಾಟ ಶುರುವಾಗಿದ್ದು ಕೇವಲ 2 ತಿಂಗಳಲ್ಲಿ ಬರೋಬ್ಬರಿ 9 ಬಾರಿ ವಿಷ ಸರ್ಪ ಕಡಿದಿದೆ.
ಕಲಬುರಗಿ : ಹಾವಿನ ದ್ವೇಷ ಹನ್ನೆರಡು ವರುಷ ಅಂತಾರೆ ಹಿರಿಯರು. ಇದೇ ಮಾತಿನಂತೆ ಇಲ್ಲೋರ್ವ 14 ವರ್ಷದ ಬಾಲಕನಿಗೆ ನಾಗರಾಜನ ಕಾಟ ಶುರುವಾಗಿದ್ದು ಕೇವಲ 2 ತಿಂಗಳಲ್ಲಿ ಬರೋಬ್ಬರಿ 9 ಬಾರಿ ವಿಷ ಸರ್ಪ ಕಡಿದಿದೆ.
ಹಾವಿನ ಕಾಟದಿಂದ ಬಾಲಕ ಮತ್ತು ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದು ದಿಕ್ಕೇ ತೋಚದಂತಾಗಿದೆ.
ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕಟ್ಟಿ ಗ್ರಾಮದ 9ನೇ ತರಗತಿಯ ಪ್ರಜ್ವಲ್ ಎಂಬಾತನೆ ಸರ್ಪ ಕಾಟದಿಂದ ಬೇಸತ್ತ ಬಾಲಕನಾಗಿದ್ದಾನೆ.
ಪ್ರಜ್ವಲ್ ಗೆ ಎರಡು ತಿಂಗಳಲ್ಲಿ ಬರೋಬ್ಬರಿ ಒಂಬತ್ತು ಬಾರಿ ಹಾವು ಕಡಿದಿದೆ.
ಈ ಬಾಲಕ ಒಂದೇ ರೀತಿಯ ಸರ್ಪದಿಂದ ಒಂಭತ್ತು ಬಾರಿ ಕಡಿತಕ್ಕೊಳಗಾಗಿದ್ದು ಏನು ಮಾಡಬೇಕೆಂದು ತಿಳಿಯದ ಸ್ಥಿತಿಯಲ್ಲಿದೆ ಬಾಲಕನ ಕುಟುಂಬವಿದೆ.
ಹಾವು ಕಚ್ಚಿದ ಒಂಭತ್ತು ಸಲವೂ ಆಸ್ಪತ್ರೆಗೆ ದಾಖಲಿಸಿ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ.
ಈ ಕುಟುಂಬ ನಾಗದೋಷಕ್ಕಾಗಿ ಮಾಡದ ಪೂಜೆಯಿಲ್ಲ. ಹೊಲದಲ್ಲಿ ಮನೆ ದೇವತೆಯ ಪುಟ್ಟ ಗುಡಿಯನ್ನೂ ನಿರ್ಮಿಸಿದ್ದಾರೆ.
ಹಾವು ಕಚ್ಚಿದ ತಕ್ಷಣ ಮೈ ಮೇಲೆ ಹಾವಿನ ಹಲ್ಲಿನ ಗುರುತು ಕಾಣುತ್ತದೆ.
ರಕ್ತವೂ ಸಹ ಬರುತ್ತದೆ. ಬೇವಿನ ತಪ್ಪಲು, ಖಾರದ ಪುಡಿ ತಿಂದರೂ ಸಪ್ಪೆ ಅನ್ನಿಸುತ್ತದೆ.
ಆದ್ರೆ ಕಚ್ಚಿದ ಹಾವು ಆ ಬಾಲಕನಿಗೆ ಬಿಟ್ಟು ಬೇರಾರಿಗೂ ಕಾಣಿಸೋದಿಲ್ಲ ಎಂಬುದು ಬಾಲಕನ ಕುಟುಂಬದವರ ಮಾತು.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಪರಿಸ್ಥಿತಿ ಕಂಡು ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.
ಹಾವಿನ ಕಾಟದಿಂದ ಮುಕ್ತಿ ಕೊಡಿಸಿ ಬಾಲಕನನ್ನು ಪಾರು ಮಾಡುವಂತೆ ಅಳಲು ತೋಡಿಕೊಳ್ಳುತ್ತಿದ್ದಾರೆ.