Connect with us

LATEST NEWS

ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲು ಸಿಎಂ ಆದೇಶ

ಉಡುಪಿ, ಆಗಸ್ಟ್ 28: ಕರಾವಳಿಯಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಸಂಪೂರ್ಣ ಸ್ತಬ್ದವಾಗಿದ್ದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ.


ಈ ಕುರಿತಂತೆ ಮಾಹಿತಿ ನೀಡಿದ ಶಾಸಕ ರಘುಪತಿ ಭಟ್ ದೈವಾರಾಧನೆ,ಅನುಮತಿ ನೀಡುವಂತೆ ಕೋರಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪನವರಿಗೆ ಮನವಿ ಮಾಡಲಾಗಿದ್ದು, ಈ ಮನವಿಗೆ ಸಿಎಂ ಸ್ಪಂದನೆ ನೀಡಿದ್ದು, ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮೂಲಕ ತಿಳಿಸಿರುವ ಶಾಸಕ ರಘುಪತಿ ಭಟ್‌ ಅವರು, ”ದೈವಾರಾಧನೆ, ನೇಮೋತ್ಸವ, ಮಾರಿ ಪೂಜೆ, ಮೊದಲಾದ ತುಳುನಾಡಿನ ಧಾರ್ಮಿಕ ಆಚರಣೆಗಳನ್ನು ನಡೆಸಲು ನಾನು ಈ ಹಿಂದೆಯೇ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿರುವಂತೆ ಮುಖ್ಯಮಂತ್ರಿಯವರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಆದೇಶಿಸಿದ್ದು, ತಕ್ಷಣ ಜಾರಿಗೆ ತರಲು ನಾನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಆಗ್ರಹಿಸುತ್ತೇನೆ” ಎಂದು ತಿಳಿಸಿದ್ದಾರೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಕರಾವಳಿ ಜಿಲ್ಲೆಗಳಲ್ಲಿನ ವರ್ಷಾವಧಿ ದೈವಾರಾಧನೆಗೆ ತೊಡಕುಂಟಾಗಿತ್ತು. ಕರಾವಳಿ ಜಿಲ್ಲೆಗಳಲ್ಲಿ ಧಾರ್ಮಿಕ ಸೇವೆಗಳಿಗೆ ನಿಷೇಧ ಹೇರಿದ್ದರಿಂದ ತುಳು ನಾಡ ದೈವರಾಧಕರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟಾಗಿದ್ದಲ್ಲದೇ ದೈವ ಪರಿಚಾರಕರ ಅಂದರೆ ನಾಗಸ್ವರ ವಾದಕರು, ಮಡಿವಾಳ, ದರ್ಶನ ಪಾತ್ರಿ, ಮಧ್ಯಸ್ಥರು, ಗರೋಡಿ ವರ್ಗದವವರು, ನಲಿಕೆ ವರ್ಗ, ಪಂಬದ ವರ್ಗದವರು ಸೇರಿ ಸುಮಾರು 600 ಜನರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಹಿನ್ನೆಲೆ ಈ ಆಚರಣೆಗಳಿಗೆ ಅವಕಾಶ ನೀಡಬೇಕು ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು 10 ಸಾವಿರ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕ ರಘುಪತಿ ಭಟ್‌ ಮನವಿ ಸಲ್ಲಿಸಿದ್ದರು.

Facebook Comments

comments