LATEST NEWS
ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕಲು ಆಗುವುದಿಲ್ಲ – ಸಿಎಂ ಬಸವರಾಜ್ ಬೊಮ್ಮಾಯಿ
ಮಂಗಳೂರು ಅಕ್ಟೋಬರ್ 13: ಕರಾವಳಿಯಲ್ಲಿ ನಡೆಯತ್ತಿರುವ ನೈತಿಕ ಪೊಲೀಸ್ ಗಿರಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಸಮರ್ಥನೆ ಮಾಡಿದ್ದು, ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಅಂಡ್ ರಿಯಾಕ್ಷನ್ ಆಗುತ್ತೆ ಎಂದು ಹೇಳಿದ್ದಾರೆ.
ಕರಾವಳಿ ಪ್ರವಾಸದಲ್ಲಿರುವ ಸಿಎಂ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕರಾವಳಿಯಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಬಗ್ಗೆ ಪರ್ತಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸಮಾಜದಲ್ಲಿ ನಾವೆಲ್ಲರೂ ಜವಾಬ್ದಾರಿ ಹೊಂದಬೇಕಾಗುತ್ತದೆ. ಸಮಾಜದಲ್ಲಿ ಹಲವಾರು ಭಾವನೆಗಳಿದ್ದಾವೆ. ಈ ಭಾವನೆಗಳಿಗೆ ಧಕ್ಕೆ ಆಗದ ಹಾಗೇ ನಾವು ನಡೆದುಕೊಳ್ಳಬೇಕಾಗುತ್ತದೆ. ಆ ಭಾವನೆಗಳಿಗೆ ಧಕ್ಕೆ ಬಂದಾಗ ಸಹಜವಾಗಿ ಆಕ್ಷನ್ ಅಂಡ್ ರಿಯಾಕ್ಷನ್ ಆಗುತ್ತೆ. ಕಾನೂನನ್ನು ಕಾಪಾಡುವ ಜೊತೆಗೆ ಸಾಮಾಜಿಕ ಸಾಮರಸ್ಯ ಕಾಪಾಡೋದು ಸರ್ಕಾರದ ಕರ್ತವ್ಯ ಎಂದ ಅವರು,ಯುವಕರು ಕೂಡ ಸಾಮಾಜಿಕವಾಗಿ ಧಕ್ಕೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮೊರಾಲಿಟಿ ಅನ್ನೋದು ಸಮಾಜದಲ್ಲಿ ಬೇಕಲ್ವಾ..? ನೈತಿಕತೆ ಇಲ್ಲದೆ ಬದುಕೋಕೆ ಆಗುತ್ತಾ. ಎಂದು ಪ್ರಶ್ನಿಸಿದರು.
ಇವತ್ತು ನಾವು ನೈತಿಕತೆ ಇಲ್ಲದೆ ಬದುಕೋಕೆ ಆಗಲ್ಲ. ನಮ್ಮೆಲ್ಲ ಸಂಬಂಧಗಳು ಮತ್ತು ಶಾಂತಿ ಸುವ್ಯವಸ್ಥೆ ಇರೋದು ನಮ್ಮ ನೈತಿಕತೆ ಮೇಲೆ. ಇದು ಇಲ್ಲದಾಗ ಆಕ್ಷನ್ಸ್, ರಿಯಾಕ್ಷನ್ಸ್ ಅಗುತ್ತೆ ಎಂದರು.