KARNATAKA
ಸಿಎಂ ಬೊಮ್ಮಾಯಿ ಪುತ್ರನಿಗೆ ಅಂತರಾಷ್ಟ್ರೀಯ ಪ್ರಶಸ್ತಿಯ ಗರಿ

ಬೆಂಗಳೂರು, ಅಕ್ಟೋಬರ್ 08: ಸಿಎಂ ಬಸವರಾಜ ಬೊಮ್ಮಾಯಿ ಪುತ್ರ, ಯುವ ಉದ್ಯಮಿ ಭರತ್ ಬಿ ಬೊಮ್ಮಾಯಿ ಅವರಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಟೈಟಾನ್ ಬಿಸಿನೆಸ್ ಅವಾರ್ಡ್ 2022 ಲಭಿಸಿದೆ. ಉತ್ಪಾದನೆ ವಿಭಾಗದಲ್ಲಿ ವರ್ಷದ ಜಾಗತಿಕ ವಾಣಿಜ್ಯೋದ್ಯಮಿಯಾಗಿ ಹೊರಹೊಮ್ಮಿದ್ದಾರೆ.
ಅಶ್ವ ಎನರ್ಜಿ ಮತ್ತು ವಾಲ್ಟಿಕ್ ಎಂಬ ಸಂಸ್ಥೆಗಳನ್ನು ಯುವ ಉದ್ಯಮಿ ಭರತ್ ಬಿ. ಬೊಮ್ಮಾಯಿ ಮುನ್ನಡೆಸುತ್ತಿದ್ದಾರೆ. ಈ ಕುರಿತಾಗಿ ಟೈಟಾನ್ ಬಿಸಿನೆಸ್ ಅವಾರ್ಡ್ ಆಯೋಜಕರಾದ ಇಂಟರ್ನ್ಯಾಷನಲ್ ಅವಾರ್ಡ್ಸ್ ಅಸೋಸಿಯೇಟ್ (IAA) ಪ್ರಕಟಣೆಯನ್ನು ಹೊರಡಿಸಿದ್ದು, ವಿಶ್ವದಾದ್ಯಂತ ಬಂದಿದ್ದ ಸಾವಿರಾರು ಪ್ರವೇಶಗಳನ್ನು ಪರಿಶೀಲಿಸಿದ ನಂತರ, ಸ್ಪರ್ಧೆಯ ತೀರ್ಪುಗಾರರು ಭರತ್ ಬಿ ಬೊಮ್ಮಾಯಿ ಅವರ ಪ್ರವೇಶವನ್ನು (ಗೋಲ್ಡ್) ಟೈಟಾನ್ ಪ್ರಶಸ್ತಿಗೆ ಅರ್ಹರು ಎಂದು ಪರಿಗಣಿಸಿದ್ದಾಗಿ ತಿಳಿಸಿದ್ದಾರೆ.

ಸೀಸನ್ 2ರ ಸ್ಪರ್ಧೆಗೆ ಯುಎಸ್ಎ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ, ಕೆನಡಾ, ಚೀನಾ, ಭಾರತ, ಓಮನ್, ಫಿಲಿಪೈನ್ಸ್, ಪೋರ್ಚುಗಲ್, ಯುಎಇ ಸೇರಿದಂತೆ ಸುಮಾರು 55 ದೇಶಗಳಿಂದ 1000 ಹೆಚ್ಚು ಪ್ರವೇಶಗಳು ಬಂದಿದ್ದವು. ವಾಣಿಜ್ಯೋದ್ಯಮಿಗಳು, SMEಗಳು ಮತ್ತು ದೊಡ್ಡ ಸಂಸ್ಥೆಗಳಿಗೆ ಸ್ಪರ್ಧೆ ಮಾಡುವ ಪ್ರವೇಶವನ್ನು ತೆರೆದಿತ್ತು. ಮಾರುಕಟ್ಟೆಯಲ್ಲಿ ಲಭ್ಯವಿದ್ದ ಎಲ್ಲ ಉದ್ಯಮಗಳಿಗೂ ಪ್ರವೇಶವನ್ನು ಮುಕ್ತಗೊಳಿಸಲಾಗಿತ್ತು.
ವಿಶ್ವದಾದ್ಯಂತ ಇರುವ ಉದ್ಯಮಿ ಮತ್ತು ಸಂಸ್ಥೆಗಳ ಸಾಧನೆಯನ್ನು ಗುರುತಿಸುವ ಉದ್ದೇಶದೊಂದಿಗೆ ಟೈಟಾನ್ ಬ್ಯುಸಿನೆಸ್ ಅವಾರ್ಡ್ನ್ನು ನೀಡಲಾಗುತ್ತದೆ. ಸ್ಪರ್ಧಿಗಳನ್ನು ಮಾರುಕಟ್ಟೆಯ ಸಣ್ಣ ಮತ್ತು ದೊಡ್ಡ ಉದ್ಯಮಿಗಳು ಎಂದು ವಿಂಗಡಿಸಿದ್ದು, ಅವರು ಗಳಿಸಿದ ನಿಷ್ಪಕ್ಷಪಾತ ಶ್ರೇಷ್ಠತೆ ಮಟ್ಟದಿಂದ ಮಾತ್ರ ಗೌರವಿಸಲಾಗುತ್ತದೆ. ಈ ಹಂತದಲ್ಲಿ ಅರ್ಹತೆ ಪಡೆದವರು ಮಾತ್ರ ಗೌರವಾನ್ವಿತ ಟೈಟನ್ ಗಳಾಗಬಹುದು.
ಸ್ಪರ್ಧೆಯಲ್ಲಿ ಅನುಭವಿ ವೃತ್ತಿಪರರು ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತ ಮತ್ತು ಕಟ್ಟುನಿಟ್ಟಾದ ಮಾನದಂಡಗಳನ್ನು ಅನುಸರಿಸಿದ್ದಾರೆ. ಅತ್ಯುತ್ಕೃಷ್ಟ ಪ್ರವೇಶಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಜವಾಬ್ದಾರಿಯನ್ನು ತೀರ್ಪುಗಾರರಿಗೆ ನೀಡಲಾಗಿತ್ತು. ತೀರ್ಪು ನೀಡುವ ಪ್ರಕ್ರಿಯೆಯಲ್ಲಿ ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಲು ಟೈಟನ್ ಪ್ರಾಮುಖ್ಯತೆಯನ್ನು ನೀಡಿದ್ದು, ಪ್ರವೇಶಗಳ ತೀರ್ಪು ನೀಡಲು 15 ದೇಶಗಳಿಂದ ಸುಮಾರು 27 ತೀರ್ಪುಗಾರರನ್ನು ನೇಮಿಸಲಾಗಿತ್ತು. ಪ್ರತಿಷ್ಠಿತ ಸಂಸ್ಥೆಗಳ ನಡುವೆ ಸ್ಪರ್ಧೆಯ ಎಲ್ಲ ಕಠಿಣ ಹಂತಗಳನ್ನು ದಾಟಿದ ಭರತ್ ಬಿ ಬೊಮ್ಮಾಯಿ ಅವರು 2022 ರ – ಟೈಟಾನ್ ಅವಾರ್ಡ್: ಸೀಸನ್ 2 ರಲ್ಲಿ ವಿಜಯರಾಗಿ ಹೊರಹೊಮ್ಮಿದ್ದಾರೆ.