BELTHANGADI
ಪಶ್ಚಿಮಘಟ್ಟದಲ್ಲಿ ಮೇಘಸ್ಪೋಟ ಏಕಾಏಕಿ ತುಂಬಿ ಹರಿದ ಹೊಳೆಗಳು ಆತಂಕದಲ್ಲಿ ಸ್ಥಳೀಯರು
ಪಶ್ಚಿಮಘಟ್ಟದಲ್ಲಿ ಮೇಘಸ್ಪೋಟ ಏಕಾಏಕಿ ತುಂಬಿ ಹರಿದ ಹೊಳೆಗಳು ಆತಂಕದಲ್ಲಿ ಸ್ಥಳೀಯರು
ಬೆಳ್ತಂಗಡಿ ಸೆಪ್ಟೆಂಬರ್ 25: ಪಶ್ಚಿಮಘಟ್ಟದಲ್ಲಿ ಮತ್ತೆ ಮೇಘಸ್ಪೋಟ ಉಂಟಾಗಿರುವ ಸಾಧ್ಯತೆ ಇದ್ದು ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಪಶ್ಚಿಮ ಘಟ್ಟದಿಂದ ಹರಿದು ಬರುವ ಹೊಳೆಗಳು ಏಕಾಏಕಿ ತುಂಬಿ ಹರಿಯುತ್ತಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.
ಹಿಕಾ ಚಂಡಮಾರುತ ಅಬ್ಬರಕ್ಕೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಕರಾವಳಿಯಲ್ಲೂ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ಅಲ್ಲದೆ ರಾಜ್ಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ.
ಈ ನಡುವೆ ಪಶ್ಚಿಮಘಟ್ಟ ಪ್ರದೇಶದ ಹೊಳೆಗಳಲ್ಲಿ ಏಕಾಏಕಿ ನೀರು ಹೆಚ್ಚಾಗಿದ್ದು, ಪಶ್ಚಿಮಘಟ್ಟದಲ್ಲಿ ಮೇಘ ಸ್ಪೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು ಗ್ರಾಮಪಂಚಾಯತ್ ವ್ಯಾಪ್ತಿಯ ದಿಡುಪೆಯಲ್ಲಿ ಹರಿಯುವ ಆನಡ್ಕ ಹಾಗೂ ನಂದಿಕಾಡು ಹೊಳೆಯಲ್ಲಿ ಏಕಾಏಕಿ ನೀರಿನ ಮಟ್ಟ ಏರಿಕೆಯಾಗಿದೆ.
ಘಟ್ಟ ಪ್ರದೇಶಗಳಿಂದ ಒಮ್ಮಗೇ ನೀರು ಬಂದಿದ್ದು, ನಂದಿಕಾಡು ಹಾಗೂ ಆನಡ್ಕ ಹೊಳೆ ತುಂಬಿ ಹರಿಯಲಾರಂಭಿಸಿದೆ. ಇದರಿಂದಾಗಿ ಈ ಹೊಳೆಯನ್ನು ದಾಟಿ ಮನೆ ಸೇರಬೇಕಾದ ಮಂದಿ ಇದೀಗ ಆತಂಕಕ್ಕೀಡಾಗಿದ್ದಾರೆ. ಹೊಳೆಯಲ್ಲಿ ನೀರಿನ ಮಟ್ಟ ಏಕಾಏಕಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಶಾಲೆಗೆ ತೆರಳಿದ್ದ ಮಕ್ಕಳನ್ನು ಪೋಷಕರು ಅಪಾಯ ಸ್ಥಿತಿಯಲ್ಲಿರುವ ಹೊಳೆಗೆ ನಿರ್ಮಿಸಿರುವ ಕಿರು ಸೇತುವೆಯಲ್ಲಿ ದಾಟಿಸುತ್ತಿದ್ದಾರೆ.
ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಕಾರಣ ಕೊಂಚ ಆಯ ತಪ್ಪಿದರೂ, ಭಾರೀ ಅನಾಹುತ ಸಂಭವಿಸುವ ಸಾಧ್ಯತೆಯೂ ಇಲ್ಲಿದೆ.
ಚಾರ್ಮಾಡಿ, ದಿಡುಪೆ, ಪರ್ಲಾಣಿ, ಕೊಳಂಬೆ ಗ್ರಾಮದಲ್ಲಿ ನೆರೆ ಭೀತಿ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬೆಟ್ಟಗಳ ಕಡೆಯಿಂದ ಕೆಸರು ನೀರನ್ನು ಹೊತ್ತು ಬರುವ ಹೊಳೆಗಳು ಅಡಿಕೆ ತೋಟಗಳಿಗೆ ನುಗ್ಗಿದ್ದು ಸ್ಥಳೀಯರು ಮಳೆಯ ಪ್ರಕೋಪದಿಂದ ನಲುಗಿ ಹೋಗಿದ್ದಾರೆ. ಪರಿಹಾರ ಕಾರ್ಯಗಳು ಇನ್ನೂ ತಲುಪದ ಕಾರಣ ಅಲ್ಲಿಯ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.