UDUPI
ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ:ಪ್ರಿಯಾಂಕ ಮೇರಿ
ಉಡುಪಿ, ಸೆಪ್ಟೆಂಬರ್ 15 : ಸೆಪ್ಟಂಬರ್ 20 ರಿಂದ 23 ರ ವರೆಗೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಸ್ವಚ್ಛ ಅಭಿಯಾನ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲೆಯ, ಪ್ರಮುಖ ಪ್ರವಾಸಿ ತಾಣಗಳಾದ, ಕಾರ್ಕಳ ಗೊಮ್ಮಟೇಶ್ವರ ಬೆಟ್ಟದ ಆವರಣ, ಕಾರ್ಕಳ ಚತುರ್ಮುಖ ಬಸದಿ ಆವರಣ, ಬಾರ್ಕೂರು ಕತ್ತಲೆ ಬಸದಿ ಆವರಣ, ಕಾರ್ಕಳದ ಕೋಟಿ ಚೆನ್ನಯ್ಯ ಥೀಮ್ ಪಾರ್ಕ್ ಆವರಣ, ಉಡುಪಿ ಅಜ್ಜರಕಾಡು ಭುಜಂಗ ಪಾರ್ಕ್ ಆವರಣ, ಮಣಿಪಾಲದ ಮಣ್ಣಪಳ್ಳ ಕರೆಯ ಸುತ್ತ, ಹೆಬ್ರಿಯು ಜೋಮ್ಲು ತೀರ್ಥ, ಶಿರೂರಿನ ಒತ್ತಿನೆಣೆ ಹಾಗೂ ಕುಂದಾಪುರದ ಕೋಡಿ ಬೀಚ್‍ನಲ್ಲಿ ಸಂಬಂಧಪಟ್ಟ ಇಲಾಖೆಗಳು, ವಿವಿಧ ಸಂಘ ಸಂಸ್ಥೆಗಳು, ಯುವಕ ಮಂಡಲಗಳು ಹಾಗೂ ಪಂಚಾಯತ್‍ಗಳ ಸಹಕಾರದೊಂದಿಗೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕೈಗೊಳ್ಳುವುದರ ಮೂಲಕ ಪ್ರವಾಸೋದ್ಯಮ ದಿನಾಚರಣೆ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಪ್ರಚಾರಕ್ಕೆ, ಸೆಪ್ಟಂಬರ್ 26 ರಂದು ಸಂಜೆ ಉಡುಪಿ ತಾಲೂಕಿನ ಬಾರಕೂರಿನ ಕತ್ತಲೆ ಬಸದಿಯಲ್ಲಿ ಹಣತೆಯಲ್ಲಿ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಛಾಯಾಚಿತ್ರ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸೆಪ್ಟಂ 27 ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನೆಡೆಯುವ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟಿಸಲಿದ್ದು, ಉಡುಪಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳು ಹಾಗೂ ವಿಶಿಷ್ಟ ಆಹಾರ ಪದ್ದತಿಗಳ ತುಣುಕು ದೃಶ್ಯ ಬಿಡುಗಡೆ, ಪ್ರವಾಸೋದ್ಯಮ ನವೀಕರಿಸಿದ ವೆಬ್ ಸೈಟ್ ಅನಾವರಣ, ಉಡುಪಿ ಪ್ರವಾಸೋದ್ಯಮ ಆಪ್ ಬಿಡುಗಡೆ , ಪ್ರವಾಸೋದ್ಯಮ ಇಲಾಖೆಯ ರೇಡಿಯೋ ಜಿಂಗಲ್ಸ್ ಗಳ ಪ್ರಸಾರ ಕಾರ್ಯಕ್ರಮ ಬಿಡುಗಡೆ ಹಾಗೂ ಕಿರುಹೊತ್ತಿಗೆ ಬಿಡುಗಡೆ ನಡೆಯಲಿದೆ ಎಂದು ತಿಳಿಸಿದರು.
ಅದೇ ದಿನ ಮಧ್ಯಾಹ್ನ ಮೂಡುಕುದ್ರುವಿನ ಗ್ರಾಮದಲ್ಲಿ ವಿಲೇಜ್ ಲೈಫ್ ಎಕ್ಸ್ ಪೀರಿಯನ್ಸ್ ಟೂರಿಸಂ ನ್ನು ಉತ್ತೇಜಿಸುವ ಸಲುವಾಗಿ, ಅತಿಥಿಗಳನ್ನು ಆಹ್ವಾನಿಸಿ , ಮೂಡುಕುದ್ರು ಗ್ರಾಮಕ್ಕೆ ಬೋಟುಗಳ ಮೂಲಕ ತೆರಳಿ , ಸ್ಥಳೀಯ ಸ್ವ ಸಹಾಯ ಸಂಘಗಳಿಂದ ಸಾಂಸ್ಕøತಿಕ ಕಾರ್ಯಕ್ರಮ,ಸ್ಥಳೀಯ ಆಹಾರ ವೈವಿಧ್ಯಗಳ ಮಾರಾಟ, ಮಹಿಳಾ ತಂಡಗಳಿಂದ ನೃತ್ಯ , ಡೋಲು ಕುಣಿತ , ಕ್ಯಾಂಪ್ ಫೈರ್ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕುರಿತಂತೆ ಜಿಲ್ಲಾಮಟ್ಟದ ವಿವಿಧ ಸಮಿತಿಗಳನ್ನು ರಚಿಸುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು.
ಸಭೆಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ವಿವಿಧ ಇಲಾಖೆಯ ಅಧಿಕಾರಿಗಳು , ಜಿಲ್ಲೆಯ ವಿವಿಧ ಪ್ರವಾಸೋದ್ಯಮ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ, ನಿರ್ಮಿತಿ ಕೇಂದ್ರ, ಬೀಚ್ ನಿರ್ವಹಣಾ ಅಭಿವೃದ್ದಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ “ಸುಸ್ಥಿರ ಪ್ರವಾಸೋದ್ಯಮ –ಅಭಿವೃದ್ಧಿಯ ಒಂದು ಸಾಧನ” ಎಂಬ ಸಂದೇಶದೊಂದಿಗೆ, ವಿಶ್ವ ಪ್ರವಾಸೋದ್ಯಮ ದಿನಾಚರಣೆ ಯನ್ನು ಸೆಪ್ಟಂಬರ್ 27 ರಂದು ಜಿಲ್ಲೆಯಲ್ಲಿ ಆಚರಿಸುತ್ತಿದೆ.
You must be logged in to post a comment Login