Connect with us

    KARNATAKA

    ಮಗುವಿಗೆ ಜನ್ಮ ನೀಡಿದ 9 ನೇ ತರಗತಿ ವಿದ್ಯಾರ್ಥಿನಿ : ಹಾಸ್ಟೆಲ್‌ ವಾರ್ಡನ್ ಅಮಾನತು..!

    ಚಿಕ್ಕಬಳ್ಳಾಪುರ : ಸರ್ಕಾರಿ ಹಾಸ್ಟೆಲ್‌ನಲ್ಲಿದ್ದ 9ನೇ ತರಗತಿಯ ವಿದ್ಯಾರ್ಥಿನಿ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಅಘಾತಕಾರಿ ಘಟನೆ ಚಿಕ್ಕಬಳ್ಳಾಪುರದ ಮಧುಗಿರಿಯಲ್ಲಿ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಹಾಸ್ಟೆಲ್ ವಾರ್ಡನ್ ಅಮಾನತಾಗಿದ್ದಾರೆ. ಬಾಗೇಪಲ್ಲಿ ಮೂಲದ 14 ವರ್ಷದ ಬಾಲಕಿಮಧುಗಿರಿಯ ಸರ್ಕಾರಿ ಹಾಸ್ಟೆಲ್‌ನಲ್ಲಿದ್ದುಕೊಂಡು 9ನೇ ತರಗತಿ ಓದುತ್ತಿದ್ದಳು. ತಾನು ಗರ್ಭಿಣಿಯಾಗಿರುವ ವಿಚಾರ ಬಾಲಕಿಗೆ ತಿಳಿದಿರಲಿಲ್ಲ. ಬಾಲಕಿ ತಾಯಿ ಅಂಗನವಾಡಿ ಶಿಕ್ಷಕಿಯಾಗಿದ್ದಾಳೆ. ಮೂರ್ನಾಲ್ಕು ದಿನಗಳ ಹಿಂದೆ ಹೊಟ್ಟೆ ನೋವು ಎಂದು ತಾಯಿ ಬಳಿ ಹೇಳಿಕೊಂಡಾಗ, ಬಾಗೇಪಲ್ಲಿಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಚುಚ್ಚುಮದ್ದು ಪಡೆದಿದ್ದಳು. ಆದರೆ ಕೆಲವೇ ಹೊತ್ತಿನಲ್ಲಿ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಪುನಃ ಆಸ್ಪತ್ರೆಗೆ ಹೋಗಿದ್ದರು. ಆಗ ಆಕೆಗೆ ಮತ್ತೊಂದು ಇಂಜೆಕ್ಷನ್ ನೀಡಿ, ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಆಗಲೇ ಆಕೆ ಗರ್ಭಿಣಿ ಎಂಬ ವಿಚಾರ ಆಸ್ಪತ್ರೆಯವರ ಗಮನಕ್ಕೂ ಬಂದಿದೆ. ಬಳಿಕ ಆಸ್ಪತ್ರೆ ವೈದ್ಯರು ಆಕೆಯ ಹೆರಿಗೆ ಮಾಡಿಸಿದ್ದಾರೆ. ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗು 2.2 ಕಿಲೋ ತೂಕ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.ಆಸ್ಪತ್ರೆಯ ಫಾರಂ ಭರ್ತಿ ಮಾಡುವುದಕ್ಕಾಗಿ ವಿವರ ಕೇಳಿದಾಗ ಆಕೆ ಶಾಲಾ ವಿದ್ಯಾರ್ಥಿನಿ ಎಂಬ ಅಂಶ ಬೆಳಕಿಗೆ ಬಂದಿದೆ. ನಂತರ ತಾಯಿ ಮತ್ತು ಮಗುವನ್ನು ಹೆಚ್ಚಿನ ಆರೈಕೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಈ ನಡುವೆ, ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ. ಬಾಲಕಿ ಉಳಿದುಕೊಂಡಿದ್ದ ತುಮಕೂರು ಜಿಲ್ಲೆ ಮಧುಗಿರಿಯ ಸರ್ಕಾರಿ ಹಾಸ್ಟೆಲ್‌ಗೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಸ್.ಕೃಷ್ಣಪ್ಪ ಮತ್ತು ಸಹಾಯಕ ನಿರ್ದೇಶಕ ವಿ. ಎಸ್.ಶಿವಣ್ಣ ಬೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಅವರಿಗೆ ವರದಿ ನೀಡಿದ್ದರು. ಈ ವರದಿ ಆಧರಿಸಿ ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿಸಿದ್ದಕ್ಕಾಗಿ ಹಾಸ್ಟೆಲ್‌ ವಾರ್ಡನ್ ಜಿ.ನಿವೇದಿತಾ ಅವರನ್ನು ಅಮಾನತು ಮಾಡಲಾಗಿದೆ.ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ಬಾಲಕಿಯ ಬಳಿ ಹೇಳಿಕೆ ಪಡೆದುಕೊಂಡ ಪೊಲೀಸರಿಗೆ, ಬಾಲಕಿಯ ಜತೆಗೆ ಲೈಂಗಿಕ ಸಂಪರ್ಕ ಬೆಳೆಸಿದವರನ್ನು ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಮೊದಲ ಬಾರಿ ಹೇಳಿಕೆ ನೀಡಿದಾಗ ಬಾಲಕಿ ತನಗಿಂತ ಎರಡು ವರ್ಷ ಹಿರಿಯ ವಿದ್ಯಾರ್ಥಿಯ ಹೆಸರು ಹೇಳಿದ್ದಳು. ಆತ ಈಗ ಶಾಲೆಗೆ ಹೋಗುತ್ತಿಲ್ಲ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಮತ್ತೊಮ್ಮೆ ವಿಚಾರಿಸಿದಾಗ ಇನ್ನೊಬ್ಬರ ಹೆಸರು ಹೇಳಿದ್ದಾಳೆ. ಹೀಗಾಗಿ ಪೊಲೀಸರು ಬಾಲಕಿಗೆ ಕೌನ್ಸೆಲಿಂಗ್ ಮಾಡಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *