Connect with us

    DAKSHINA KANNADA

    ಸಿವಿಲ್ ಜಡ್ಜ್ ಪರೀಕ್ಷೆ: ಮಂಗಳೂರಿನಲ್ಲೇ ತುಂಬು ಗರ್ಭಿಣಿ ವಕೀಲೆಗೆ ನ್ಯಾಯಾಂಗ ಪರೀಕ್ಷೆ ಬರೆಯಲು ಹೈಕೋರ್ಟ್ ಅನುಮತಿ

    ಮಂಗಳೂರು:  ಸಿವಿಲ್ ಜಡ್ಜ್ ಮುಖ್ಯ ಪರೀಕ್ಷೆ ಬರೆಯಲು ಬೆಂಗಳೂರಿಗೆ ಪ್ರಯಾಣಿಸಲು ಸಾಧ್ಯವಾಗದ ತುಂಬು ಗರ್ಭಿಣಿ ಅಭ್ಯರ್ಥಿಯೊಬ್ಬರಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದೆ.

    ವಕೀಲರಾದ ನೇತ್ರಾವತಿ ಎಂಟೂವರೆ ತಿಂಗಳ ತುಂಬು ಗರ್ಭಿಣಿಯಾಗಿದ್ದು, ಸಿವಿಲ್ ಜಡ್ಜ್ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಆದರೆ ತುಂಬು ಗರ್ಭಿಣಿಯಾಗಿರುವ ಕಾರಣ ಮುಖ್ಯ ಪರೀಕ್ಷೆ ಬರೆಯಲು ಬೆಂಗಳೂರಿಗೆ ತೆರಳಲು ಕಷ್ಟವಾಗುವ ಬಗ್ಗೆ ಹೈಕೋರ್ಟ್‌ಗೆ ಅವರು ವಿವರ ನೀಡಿದ್ದರು. ಈ ಬಗ್ಗೆ ಮಾನವೀಯತೆಯನ್ನು ಪ್ರದರ್ಶಿಸಿರುವ ಹೈಕೋರ್ಟ್ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿಯೇ ಸಕಲ ಭದ್ರತೆ ಹಾಗೂ ವ್ಯವಸ್ಥೆಯೊಂದಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ನೇತ್ರಾವತಿ ಅವರು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ದ.ಕ. ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ (ಪ್ರಭಾರ) ರಾಜೇಶ್ ಅವರು ಮಾಹಿತಿ ನೀಡಿದ್ದಾರೆ.

    ಪರೀಕ್ಷೆಯ ಸಂದರ್ಭ ಮೇಲ್ವಿಚಾರಕರಾಗಿ ಬೆಂಗಳೂರಿನ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರನ್ನು ಕೂಡಾ ನಿಯೋಜಿಸಲಾಗಿದೆ. ಪರೀಕ್ಷಾ ಸಮಯದಲ್ಲಿ ಆರೋಗ್ಯ ಏರುಪೇರಾದಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಸಿದ್ಧವಿರುವಂತೆಯೂ ಹೈಕೋರ್ಟ್‌ನಿಂದ ದ..ಜಿಲ್ಲಾ ಮತ್ತು ಪ್ರಧಾನ ನ್ಯಾಯಾಧೀಶರಿಗೆ ನಿರ್ದೇಶಿಸಲಾಗಿದೆ.

    ಕರ್ನಾಟಕ ಹೈಕೋರ್ಟ್ ಇತಿಹಾಸದಲ್ಲಿ ಹೊಂದಿರುವ ಉನ್ನತ ಗೌರವವನ್ನು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಅವರ ಈ ನಡೆ ಎತ್ತಿಹಿಡಿದಿದೆ ಎಂದು ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಕೆಎಸ್ ಭರತ್ ಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ರಾಜ್ಯದಲ್ಲಿ ಖಾಲಿ ಇರುವ 57 ಸಿವಿಲ್ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು 2023ರ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಪೂರ್ವಭಾವಿ ಪರೀಕ್ಷೆಯಲ್ಲಿ ಆರು ಸಾವಿರಕ್ಕೂ ಅಧಿಕ ವಕೀಲ ಅಭ್ಯರ್ಥಿಗಳು ಭಾಗಿಯಾಗಿದ್ದರು. ಇವರಲ್ಲಿ 1022 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. ಅದರಂತೆ ಮಂಗಳೂರಿನ ವಕೀಲೆ ನೇತ್ರಾವತಿ ಅವರೂ ನ. 18 ಮತ್ತು 19ರಂದು ಬೆಂಗಳೂರಿನಲ್ಲಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆಯಲು ಕಷ್ಟ ಸಾಧ್ಯವಾದ ಕಾರಣ ನೇತ್ರಾವತಿ ಅರು ಹೈಕೋರ್ಟ್ ನೇಮಕಾತಿ ಸಮಿತಿಗೆ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆಯಲು ಅನುಮತಿಗೆ ವಿನಂತಿಸಿದ್ದರು.

    ಮನವಿಯನ್ನು ಹೈಕೋರ್ಟ್ ನೇಮಕಾತಿ ಸಮಿತಿ ಮುಂದೆ ಇರಿಸಲಾಗಿತ್ತು. ನ್ಯಾ. ಪಿ.ಎಸ್. ದಿನೇಶ್ ಕುಮಾರ್, ನ್ಯಾ. ಕೆ. ಸೋಮಶೇಖರ್, ನ್ಯಾ. ಸುನಿಲ್ ದತ್ ಯಾದವ್, ನ್ಯಾ. ಅಶೋಕ್ ಎಸ್. ಕಿಣಗಿ ಹಾಗೂ ನ್ಯಾ. ಎಂ. ನಾಗಪ್ರಸನ್ನ ಅವರನ್ನು ಒಳಗೊಂಡ ಸಮಿತಿ ನೇತ್ರಾವತಿ ಅವರಿಗೆ ಮಂಗಳೂರಿನಲ್ಲಿಯೇ ಪರೀಕ್ಷೆ ಬರೆಯಲು ಒಪ್ಪಿಗೆ ನೀಡಿತ್ತು. ಇದರಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ವಕೀಲೆ ನೇತ್ರಾವತಿ ಅವರಿಗೆ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅವಕಾಶದ ಜತೆಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಆದೇಶಿಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *