DAKSHINA KANNADA
ಕಾನೂನು ಮೀರಿ ವರ್ತಿಸುವ ಸಿಟಿ ಬಸ್ ಗಳ ವಿರುದ್ಧ ಟ್ರಾಫಿಕ್ ಪೋಲೀಸರ ಕ್ರಮ, ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಂತೆ ಬಸ್ ಸಿಬ್ಬಂದಿಗಳಿಂದ ಸಾರ್ವಜನಿಕರ ಮೇಲೆ ಪರಾಕ್ರಮ
ಕಾನೂನು ಮೀರಿ ವರ್ತಿಸುವ ಸಿಟಿ ಬಸ್ ಗಳ ವಿರುದ್ಧ ಟ್ರಾಫಿಕ್ ಪೋಲೀಸರ ಕ್ರಮ,
ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವಂತೆ ಬಸ್ ಸಿಬ್ಬಂದಿಗಳಿಂದ ಸಾರ್ವಜನಿಕರ ಮೇಲೆ ಪರಾಕ್ರಮ
ಮಂಗಳೂರು, ಸೆಪ್ಟಂಬರ್ 26: ಕಾನೂನು ಮೀರಿ ಸಂಚರಿಸುತ್ತಿದ್ದ ಸಿಟಿ ಬಸ್ ಒಂದನ್ನು ತಡೆದು ನಿಲ್ಲಿಸಿದ ಪೋಲೀಸರ ವಿರುದ್ಧ ಧ್ವನಿ ಎತ್ತುವಂತೆ ಬಸ್ ಸಿಬ್ಬಂದಿಗಳು ಸಾರ್ವಜನಿಕರಿಗೆ ಒತ್ತಡ ಹೇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳೂರು ನಗರ ಟ್ರಾಫಿಕ್ ಪೋಲೀಸರು ಮಂಗಳೂರು ನಗರದಲ್ಲಿ ಎರ್ರಾಬಿರ್ರಿ ಓಡಾಡುವ ಸಿಟಿ ಬಸ್ ಗಳ ನಿಯಂತ್ರಣಕ್ಕೆ ಹಲವು ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಸಿಟಿ ಬಸ್ ಗಳಲ್ಲಿ ಕರ್ಕಶ ಹಾರ್ನ್ ಗಳನ್ನು ತೆಗೆಯುವ, ಫುಟ್ ಪಾತ್ ನಲ್ಲಿ ನೇತಾಡುವ ಹಾಗೂ ಅತೀ ವೇಗದ ಚಾಲನೆಯ ವಿರುದ್ಧ ಈಗಾಗಲೇ ಆಂದೋಲನದ ರೀತಿಯಲ್ಲಿ ಪೋಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅದೇ ಪ್ರಕಾರ ನಗರದಲ್ಲಿ ಅತೀ ವೇಗ ಚಾಲನೆ ಹಾಗೂ ನಿರ್ಲಕ್ಷ್ಯದ ಚಾಲನೆ, ಬಸ್ ಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿದ್ದ ಬಸ್ 11a ನಂಬರ್ ನ ಸುವರ್ಣ ಟ್ರಾವೆಲ್ಸ್ ಎನ್ನುವ ಬಸ್ಸನ್ನು ಪೋಲೀಸರು ತಡೆ ಹಿಡಿದಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಸ್ ಸಿಬ್ಬಂದಿಗಳು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಬಸ್ ನಿಂದ ಕೆಳಗಿಳಿಸಿ ಪೋಲೀಸರ ವಿರುದ್ಧ ಧ್ವನಿ ಎತ್ತುವಂತೆ ಒತ್ತಡ ಹೇರಿದ್ದಾರೆ.
ಕಾನೂನು ಮೀರಿ ದುರ್ವರ್ತನೆ ತೋರುವುದಲ್ಲದೆ, ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತಿದ್ದ ಟ್ರಾಫಿಕ್ ಪೋಲೀಸರ ವಿರುದ್ಧ ಸಾರ್ವಜನಿಕರನ್ನೇ ಎತ್ತಿಕಟ್ಟುವ ಪ್ರಯತ್ನಕ್ಕೆ ಈ ಬಸ್ ನ ಸಿಬ್ಬಂದಿಗಳು ಇಳಿದಿರುವುದು ಈ ವಿಡಿಯೋದಲ್ಲಿ ಚಿತ್ರೀಕರಣವಾಗಿದೆ.
ಪ್ರಯಾಣಿಕರು ಯಾರೂ ಪೋಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸದೇ ಇದ್ದಾಗ ವ್ಯಕ್ತಿಯೊಬ್ಬ ಮಹಿಳೆಯರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದೂ ಈ ವಿಡಿಯೋದಲ್ಲಿ ದಾಖಲಾಗಿದೆ.
ಕಾನೂನು ಮೀರಿ ವರ್ತಿಸುವ ಬಸ್ ಚಾಲಕರು ಮೊದಲು ಕಾನೂನನ್ನು ಅರಿತು ಬಸ್ ಚಾಲನೆ ಮಾಡಿದಲ್ಲಿ ಯಾವ ಪೋಲೀಸರೂ ತೊಂದರೆ ನೀಡುವುದಿಲ್ಲ ಎನ್ನುವುದನ್ನು ಒಮ್ಮೆ ಅರಿತುಕೊಳ್ಳೋದು ಒಳಿತು.