LATEST NEWS
ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ

ಉಡುಪಿಯಲ್ಲಿ ಸಂಭ್ರಮದ ವಿಟ್ಲಪಿಂಡಿ ಉತ್ಸವ
ಉಡುಪಿ ಸೆಪ್ಟೆಂಬರ್ 3: ಶ್ರೀಕೃಷ್ಣನ ಜನ್ಮವನ್ನು ಸ್ಮರಿಸುವ, ಸಂಭ್ರಮಿಸುವ ವಿಟ್ಲಪಿಂಡಿ ಉತ್ಸವ ಶ್ರೀಕೃಷ್ಣ ಮಠದಲ್ಲಿ ಇಂದು ವೈಭವದಿಂದ ಸಂಪನ್ನಗೊಂಡಿತು.
ಭಕ್ತಿಯ ಭಾವೋದ್ವೇಗದಲ್ಲಿ ಮುಳುಗಿದ ಅಪಾರ ಜನಸ್ತೋಮ, ಭಾವಪರವಶರಾಗಿ ಕೃಷ್ಣ ಕೃಷ್ಣ ಎಂದು ಮೈಮರೆತು ಶ್ರೀ ಕೃಷ್ಣ ಲೀಲೋತ್ಸವದಲ್ಲಿ ಕುಣಿದು ಕುಪ್ಪಳಿಸಿದ ಭಗವತ್ ಭಕ್ತರ ಭಕ್ತಿಯ ಉದ್ವೇಗ ಇದು ಉಡುಪಿಯಲ್ಲಿ ನಡೆದ ಶ್ರೀ ಕೃಷ್ಣ ಬಾಲ ಲೀಲೋತ್ಸವ ವಿಟ್ಲ ಪಿಂಡಿ ಉತ್ಸವದ ಕ್ಷಣಗಳು.

ಸಾಂಪ್ರದಾಯಿಕವಾಗಿ ಗೊಲ್ಲರು ವೇಷದಲ್ಲಿ ಕೃಷ್ಣ ಮಠದ ಮುಂಬಾಗದಲ್ಲಿ ಮೊಸರು ಕುಡಿಕೆಯನ್ನು ಒಡೆಯುವ ಮೂಲಕ ಮೊಸರು ಕುಡಿಕೆ ಉತ್ಸವಕ್ಕೆ ಚಾಲನೆ ನೀಡಿದರು. ಪರ್ಯಾಯ ಶ್ರೀ ವಿದ್ಯಾಧೀಶ ಸ್ವಾಮೀಜಿ ಚಿನ್ನದ ರಥದಲ್ಲಿ ಕೃಷ್ಣನ ಮೂಲ ಮೃತ್ತಿಕಾ ಮೂರ್ತಿಯನ್ನು ಕುಳ್ಳಿರಿಸಿ ಪೂಜೆಯನ್ನು ನೆರವೇರಿಸಿ ವಿಟ್ಲಪಿಂಡಿಯ ಉತ್ಸವಕ್ಕೆ ಚಾಲನೆ ನೀಡಿದರು.
ಸ್ವಾಮೀಜಿಯವರು ಪಲ್ಲಕ್ಕಿಯಲ್ಲಿ ರಥಬೀದಿಯ ಸುತ್ತಲೂ ಮೆರವಣೆಗೆ ನಡೆಸಿ ಭಕ್ತರಿಗೆ ಹಂಚಲು ತಯಾರಿಸಿದ 50 ಬಗೆಯ ಉಂಡೆ ಚಕ್ಕುಲಿಗಳನ್ನು , ವಿವಿಧ ಬಗೆಯ ಹಣ್ಣುಗಳನ್ನು ಮೆರವಣೆಗೆಯ ಸಂದರ್ಭದಲ್ಲಿ ವಿತರಿಸಿದರು. ಹಣ್ಣು – ಹಂಪಲುಗಳನ್ನು ಮತ್ತು ನಾಣ್ಯವನ್ನು ಪ್ರಸಾದ ರೂಪವಾಗಿ ವಿತರಿಸುವಾಗ ಭಕ್ತ ಸಮೂಹವು ಕೃಷ್ಣ ಪ್ರಸಾದವನ್ನು ನಾ ಮುಂದು ತಾ ಮುಂದು ಎನ್ನತ್ತ ಪ್ರಸಾದಕ್ಕಾಗಿ ಮುಗಿ ಬೀಳುತ್ತಿದ್ದ ದೃಶ್ಯ ನೋಡುಗರಿಗೆ ಮುದ ನೀಡಿತು.
ಮೆರವಣಿಗೆಯಲ್ಲಿ ಹುಲಿವೇಷ ನೃತ್ಯ, ಮರಕಾಲು ನೃತ್ಯ, ವಿವಿಧ ಕಲಾಕೃತಿಗಳ ಮೆರವಣಿಗೆ ಉತ್ಸವಕ್ಕೆ ಮೆರಗು ನೀಡಿತು. ಎರಡು ದಿನಗಳ ಕಾಲ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲ ಪಿಂಡಿಯ ಮಹೋತ್ಸವ ರಥ ಬೀದಿಯಲ್ಲಿ ಮೆರವಣಿಗೆ ಮಾಡಿದ ಶ್ರೀ ಕೃಷ್ಣನ ಮೂಲ ವಿಗ್ರಹ ಮೂರ್ತಿಯನ್ನು ಮಧ್ವ ಸರೋವರದಲ್ಲಿ ಜಲಸ್ಥಂಭನ ಮಾಡುವ ಮೂಲಕ ಶ್ರೀ ಕೃಷ್ಣನ ಬಾಲ ಲೀಲೋತ್ಸವ ಸಮಾಪ್ತಿಗೊಂಡಿತು.