LATEST NEWS
ಸಿಗರೇಟ್ ಮಾರುವ ಅಂಗಡಿಗಳಲ್ಲಿ ತಿಂಡಿ ಪದಾರ್ಥ ಗಳು ಬ್ಯಾನ್
ಸಿಗರೇಟ್ ಮಾರುವ ಅಂಗಡಿಗಳಲ್ಲಿ ತಿಂಡಿ ಪದಾರ್ಥ ಗಳು ಬ್ಯಾನ್
ಹೊಸದಿಲ್ಲಿ ಸೆಪ್ಟೆಂಬರ್ 27: ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಪರವಾನಗಿ ಪಡೆದ ಅಂಗಡಿಗಳು, ಇತರ ಯಾವುದೇ ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಚಿವಾಲಯ ಹೇಳಿದೆ.
ಈ ಕ್ರಮವು ಮಕ್ಕಳನ್ನು ತಂಬಾಕು ಉತ್ಪನ್ನಗಳಿಗೆ ಒಡ್ಡಿಕೊಳ್ಳುವುದನ್ನು ತಡೆಗಟ್ಟಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ತಂಬಾಕು ಉತ್ಪನ್ನಗಳ ನಿಯಂತ್ರಣವನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಲು ಈ ರೀತಿಯ ನಿಯಮ ಅವಶ್ಯಕತೆ ಇದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದೆ.
ಮುನ್ಸಿಪಲ್ ಅಥಾರಿಟಿಯ ಮೂಲಕ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ಅಥವಾ ಅಧಿಕಾರವನ್ನು ನೀಡುವ ಒಂದು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರ್ಥಿಕ ಸಲಹೆಗಾರ ಅರುಣ್ ಕುಮಾರ್ ಝಾ ಹೇಳಿದ್ದಾರೆ.
ಇದಲ್ಲದೆ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ಪಡೆದ ಅಂಗಡಿಗಳು ಇನ್ನು ಮುಂದೆ ಯಾವುದೇ ರೀತಿಯ ತಿಂಡಿ ಪದಾರ್ಥಗಳಾದ , ಚಿಪ್ಸ್, ಬಿಸ್ಕೆತ್, ಸಾಫ್ಟ್ ಪಾನೀಯಗಳು ಮುಂತಾದ ತಂಬಾಕು ಅಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಈ ಹಿನ್ನಲೆಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮತಿ ನೀಡುವಲ್ಲಿ ಕಾನೂನು ರೂಪಿಸಲಾಗುವುದು. ಮಕ್ಕಳು ಹೆಚ್ಚಾಗಿ ತಿನ್ನುವ ತಿಂಡಿ ಪದಾರ್ಥಗಳನ್ನು ಸಿಗರೇಟ್ ವ್ಯಾಪಾರ ಮಾಡುವ ಅಂಗಡಿಗಳಲ್ಲಿ ಮಾರಾಟ ಮಾಡುವುದರಿಂದ ಚಿಕ್ಕ ಮಕ್ಕಳು ತಂಬಾಕು ಪದಾರ್ಥಗಳ ಕಡೆಗೆ ಆಕರ್ಷಿತರಾಗುವ ಹಿನ್ನಲೆಯಲ್ಲಿ ಈ ರೀತಿಯ ಕಾನೂನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಂಬಾಕು ಬಳಕೆಯನ್ನು ತಡೆಗಟ್ಟಲು ವಿವಿಧ ನಿಯಮಗಳು ಮತ್ತು ಕಟ್ಟುಪಾಡುಗಳ ಬಗ್ಗೆ ಆರೋಗ್ಯ ಸಚಿವಾಲಯವು ಮಹತ್ವವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಸಿಗರೆಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ 2003 ಅನ್ವಯ ನಿರ್ದಿಷ್ಟವಾಗಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ನೇರ ಮತ್ತು ಪರೋಕ್ಷ ಜಾಹೀರಾತು, ಪ್ರಚಾರ ಮತ್ತು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಪ್ರಾಯೋಜಕತ್ವವನ್ನು ನಿಷೇಧಿಸಲಾಗಿದ್ದು, ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಮತ್ತು ಎಲ್ಲಾ ಶೈಕ್ಷಣಿಕ ಸಂಸ್ಥೆಗಳ 100 ಗಜಗಳ ಒಳಗೆ ಯಾವುದೇ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಕಾನೂನು ಇದೆ. ಈ ಹಿನ್ನಲೆಯಲ್ಲಿ ತಂಬಾಕು ಬಳಕೆಯನ್ನು ಕಡಿಮೆ ಮಾಡುವ ದೃಷ್ಠಿಯಿಂದ ಸರಕಾರ ವಿವಿಧ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಚಿಂತಿಸಿದೆ.