LATEST NEWS
ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಸಂಸದರಿಗೆ ಕೇರಳ ಬಿಷಪ್ ಕೌನ್ಸಿಲ್ ಪತ್ರ – ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರತಿಕ್ರಿಯೆ

ಮಂಗಳೂರು ಮಾರ್ಚ್ 31: ದೇಶದಲ್ಲಿ ಜಾರಿಯಲ್ಲಿರುವ ಅಸಂವಿಧಾನಕ ಹಾಗೂ ನ್ಯಾಯಸಮ್ಮತವಲ್ಲದ ವಕ್ಫ್ ಕಾಯ್ದೆಗೆ ಸಂಬಂಧಿಸಿದ ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವಂತೆ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್) ಲೋಕಸಭಾ ಸದಸ್ಯರುಗಳಿಗೆ ಮನವಿ ಮಾಡಿದೆ.
ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಈ ವಕ್ಫ್ ಕಾಯ್ದೆಯಿಂದ ಜನಸಾಮಾನ್ಯರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಾಗಿದೆ. ಈ ಕಾಯ್ದೆಯಿಂದಾಗಿ ಪ್ರತಿಯೊಂದು ಸಮುದಾಯದವರು ಕೂಡ ಭೂ ಒತ್ತುವರಿ, ಭೂ ಮಾರಾಟ, ಚಾರಿಟಿ ಹೆಸರಿನಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಮಾಡಿರುವ ದೊಡ್ಡ ತಪ್ಪನ್ನು ಸರಿಪಡಿಸುವ ಸಮಯ ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಬ್ಕಾ ಸಾತ್ ಸಬ್ಕಾ ವಿಕಾಸ್ ಅಡಿ ವಿಕಸಿತ ಭಾರತದ ಪರಿಕಲ್ಪನೆಯನ್ನು ನಿಜಗೊಳಿಸುವತ್ತ ಮಹತ್ವದ ಹೆಜ್ಜೆಯಿರಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ಎಲ್ಲ ಜಾತಿ-ವರ್ಗದಲ್ಲಿ ಧ್ವನಿಯಿಲ್ಲದವರು ಹಾಗೂ ಅತಿ ಕಡುಬಡವರ ಪರವಾಗಿ ನಾವೆಲ್ಲ ಒಟ್ಟಾಗಿ ನಿಲ್ಲಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರವು ಜಾರಿಗೊಳಿಸುತ್ತಿರುವ ಹೊಸ ವಕ್ಫ್ ತಿದ್ದುಪಡಿ ಮಸೂದೆಯು ನಿಜವಾದ ವಕ್ಫ್ ಕಾಯ್ದೆಯಿಂದ ಅನ್ಯಾಯ-ತೊಂದರೆಗೆ ಒಳಗಾಗುತ್ತಿರುವವರ ಪಾಲಿಗೆ ಅನುಕೂಲತೆಗಳನ್ನು ಕಲ್ಪಿಸಲಿದೆ. ಆದರೆ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಶ್ರೀಮಂತರು, ಭೂ ಒತ್ತುವರಿ ಮಾಡಿಕೊಂಡವರನ್ನು ರಕ್ಷಿಸುವುದಕ್ಕಾಗಿ ಬಡವರ್ಗದ ಮುಸ್ಲಿಮರ ಹೆಸರು ಹೇಳಿಕೊಂಡು ಈ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೆಲವರು ವಿರೋಧಿಸುತ್ತಿದ್ದಾರೆ. ಇದೀಗ ಕೊಚ್ಚಿಯ ಮುನಂಬಮ್ ಉಪನಗರದಲ್ಲಿರುವ ಕ್ರಿಶ್ಚಿಯನ್ ಕುಟುಂಬಗಳು ಕೂಡ ಇದೀಗ ತಮ್ಮ ಭೂಮಿಯನ್ನು ವಕ್ಫ್ ಮಂಡಳಿ ಅತಿಕ್ರಮಣ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೆಲವು ವಾರಗಳ ಹಿಂದೆಯಷ್ಟೇ ಇದೇ ರೀತಿ ಮಂಗಳೂರಿನಲ್ಲಿಯೂ ಕೆಲವೊಂದು ವ್ಯಕ್ತಿಗಳು ಹಾಗೂ ಸಂಘಟನೆಗಳು ವಕ್ಫ್ ಆಸ್ತಿ ಹೆಸರಿನಲ್ಲಿ ಬೇರೆ ಸಂಸ್ಥೆಗಳ ವಶದಲ್ಲಿರುವ ಆಸ್ತಿ ಮೇಲೆ ಹಕ್ಕು ಸಾಧಿಸುವ ಹುನ್ನಾರ ನಡೆಸಿದೆ. ಇದು ನಿಜಕ್ಕೂ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಆ ಮೂಲಕ ಶ್ರೀಮಂತರ ಭೂಕಬಳಿಕೆದಾರರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನಾನಾ ರೀತಿಯ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದೇ ಭಾರತೀಯ ಮುಸ್ಲಿಂ ನಿಜವಾಗಿಯೂ ತನ್ನ ಸಮುದಾಯದ ಬಡ ಹಾಗೂ ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದರೆ, ವಕ್ಫ್ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಈ ರೀತಿ ಅಪಪ್ರಚಾರ ಮಾಡುವ ಗುಂಪಿನವರ ಕುತಂತ್ರಗಳನ್ನು ನಂಬುವುದಿಲ್ಲ. ಹೀಗಿರುವಾಗ, ಈ ಹಿಂದೆ ಮಾಡಿರುವ ತಪ್ಪನ್ನು ಸರಿಪಡಿಸುವ ಕಾಲವಿದು. ಆ ಮೂಲಕ ವಕ್ಫ್ ತಿದ್ದುಪಡಿ ಕಾಯ್ದೆಯು ರಾಜಕೀಯ ಲಾಭಕ್ಕಾಗಿ ಜನರನ್ನು ದಾರಿತಪ್ಪಿಸುವುದನ್ನು ಕೊನೆಗೊಳಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.