KARNATAKA
ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಪ್ರತಿಮೆ ಧ್ವಂಸ
ಚಿತ್ರದುರ್ಗ, ಆಗಸ್ಟ್ 29: ತಾಲ್ಲೂಕಿನ ಮಲ್ಲಾಡಿಹಳ್ಳಿಯ ಅನಾಥ ಸೇವಾಶ್ರಮದಲ್ಲಿ ನಿರ್ಮಿಸಲಾಗಿದ್ದ ಶಿವಮೂರ್ತಿ ಮುರುಘಾ ಶರಣರ ಪ್ರತಿಮೆಯನ್ನು ಗ್ರಾಮಸ್ಥರು ಸೋಮವಾರ ಧ್ವಂಸಗೊಳಿಸಿದ್ದಾರೆ.
ಮಲ್ಲಾಡಿಹಳ್ಳಿ, ಕೆಂಗುಂಟೆ, ದುಮ್ಮಿ, ರಾಮಘಟ್ಟ ಸೇರಿದಂತೆ ಸುತ್ತಲಿನ ಗ್ರಾಮದ ಯುವಕರ ಗುಂಪು ಆಶ್ರಮ ಪ್ರವೇಶಿಸಿ ಶಿವಮೂರ್ತಿ ಶರಣರ ಫೋಟೋಗಳನ್ನು ಹೊರಗೆ ತಂದು ಶವಯಾತ್ರೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಗ್ರಾಮದ ಮುಖ್ಯವೃತ್ತದಲ್ಲಿ ಶಿವಮೂರ್ತಿ ಶರಣರ ಫೋಟೋಗಳನ್ನು ಸುಟ್ಟು ಹಾಕಿದರು.
‘ರಾಘವೆಂದ್ರ ಸ್ವಾಮೀಜಿ ಮಲ್ಲಾಡಿಹಳ್ಳಿ ಆಶ್ರಮವನ್ನು ಎತ್ತರಕ್ಕೆ ಕೊಂಡೊಯ್ದಿದ್ದರು. ಆದರೆ ಶಿವಮೂರ್ತಿ ಮುರುಘಾ ಶರಣರು ಆಶ್ರಮದ ಅಧ್ಯಕ್ಷರಾಗಿ 15 ವರ್ಷ ಕಳೆದಿದ್ದು, ಯಾವುದೇ ಅಭಿವೃದ್ಧಿ ಆಗಿಲ್ಲ. ಮಂಗನ ಕೈಲಿ ಮಾಣಿಕ್ಯ ಕೊಟ್ಟಂತೆ ಆಗಿದೆ. ಆಶ್ರಮದ ಆವರಣದಲ್ಲಿ ದನಕರುಗಳು ಮೇಯುವ ದುಸ್ಥಿತಿ ಬಂದಿದೆ. ಆಶ್ರಮಕ್ಕೆ ವರ್ಷಕ್ಕೆ ₹ 9 ಕೋಟಿ ಆದಾಯ ಬರುತ್ತಿದ್ದು, ಹಣ ದುರುಪಯೋಗ ಮಾಡಲಾಗಿದೆ’ ಎಂದು ರೈತ ಮುಖಂಡ ಸಂತೋಷ್, ಕೆಂಗುಂಟೆ ಓಂಕಾರಪ್ಪ, ಅಮೀರ್, ಅಭಿಷೇಕ್, ರಂಗನಾಥ್, ಚೇತನ್ ಆರೋಪಿಸಿದರು.
‘ಆಶ್ರಮದ ಟ್ರಸ್ಟಿಗಳೂ ಸರಿಯಾಗಿ ಆಶ್ರಮಕ್ಕೆ ಬರುವುದಿಲ್ಲ. ಮಲ್ಲಾಡಿ ಹಳ್ಳಿ ಆಶ್ರಮ ಸಿಸ್ತಿಗೆ ಹೆಸರಾಗಿತ್ತು. ಈಗ ಆಶ್ರಮದಲ್ಲಿ ಯಾವುದೇ ಶಿಸ್ತು ಇಲ್ಲ. ಕಳಂಕ ಹೊತ್ತಿರುವ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಯುವಕರ ಗುಂಪು ಆಗ್ರಹಿಸಿತು.